ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ರಿಯಾಕ್ಷನ್ ಕೊಟ್ಟಿದ್ದಾರೆ. ಹೌದು ನಿನ್ನೆ ವಿಜಯಲಕ್ಷ್ಮಿ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಪ್ರಕರಣಕ್ಕೆ ಕುರಿತಂತೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಪತ್ನಿ ಘಟನೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ.
ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ʼಕಳೆದ ಕೆಲವು ದಿನಗಳಿಂದ ದರ್ಶನ್ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಮತ್ತು ಈ ಘಟನೆಯಿಂದ ನನಗೆ ಹಾಗೂ ನನ್ನ ಹದಿಹರೆಯದ ಮಗನಿಗೆ, ದರ್ಶನ್ ಅವರ ಸ್ನೇಹಿತರಿಗೆ, ಅಭಿಮಾನಿಗಳಿಗೆ ತುಂಬಾ ದುಃಖವಾಗಿದೆʼ ಎಂದು ಹೇಳಿದ್ದಾರೆ.
ತಾಯಿ ಚಾಮುಂಡೇಶ್ವರಿ ಹಾಗೂ ನಮ್ಮ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಈ ಪ್ರಕರಣದಲ್ಲಿ ನ್ಯಾಯವು ಮೇಲುಗೈ ಸಾಧಿಸಲಿದೆ. ನ್ಯಾಯಾಲದಿಂದ ಪ್ರಕಟವಾಗಲಿರುವ ತೀರ್ಪು ದರ್ಶನ್ ಹಾಗೂ ಅಭಿಮಾನಿಗಳಿಗೆ ನೆಮ್ಮದಿಯ ಭಾವ ಮೂಡಿಸಲಿದೆ ಎಂದು ನಾನು ಭಾವಿಸುತ್ತೇನೆ. ಸತ್ಯ ಮೇವ ಜಯತೆʼ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿರುವ ವಿಜಯಲಕ್ಷ್ಮೀ, ವಿವಿಧ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಸತ್ಯಕ್ಕೆ ದೂರವಾದ ಸುದ್ದಿಗಳು ಪ್ರಸಾರವಾಗುತ್ತಿವೆ. ದಯವಿಟ್ಟು ತನಿಖಾಧಿಕಾರಿಗಳು ನೀಡುವ ಮಾಹಿತಿಯನ್ನಷ್ಟೇ ಪ್ರಕಟಿಸಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿರುವ ಅವರು, ತಮ್ಮ ಕುಟುಂಬದ ಬಗ್ಗೆ ಟಿವಿ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳು ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
ರೇಣುಕಾಸ್ವಾಮಿ ಪ್ರಕರಣ: ಮಾಧ್ಯಮಗಳಿಗೆ ತಡೆಯಾಜ್ಞೆ ತಂದ ವಿಜಯಲಕ್ಷ್ಮೀ
Date: