ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ಗೆ ಮಧ್ಯಂತರ ಜಾಮೀನು
ಬೆಂಗಳೂರು: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 4.5 ತಿಂಗಳಿಂದ ಜೈಲಿನಲ್ಲಿದ್ದಾರೆ. ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಅವರು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ಗೆ ಚಿಕಿತ್ಸೆಯ ಸಲುವಾಗಿ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಬೆನ್ನುಹುರಿ ನೋವಿಗೆ ಪರಿಹಾರ ಪಡೆಯಲು ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಂಡಬೇಕೆಂದು ಕೋರಿ ದರ್ಶನ್ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಇಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ
ಮೈಸೂರಿನಲ್ಲಿ ಶೂಟಿಂಗ್ ತೆರಳಿದ್ದ ದರ್ಶನ್ ಅವರನ್ನು ಪೊಲೀಸರು ಜೂನ್ 11 ರಂದು ಬೆಂಗಳೂರಿಗೆ ಕರೆ ತಂದು ಬಂಧಿಸಿದ್ದರು. 11 ದಿನಗಳ ಕಾಲ ಪೊಲೀಸರ ಕಸ್ಟಡಿಯಲ್ಲಿ ವಿಚಾರಣೆ ಎದುರಿಸಿದ್ದ ದರ್ಶನ್ ಬಳಿಕ ವಿಚಾರಣಾ ಕೈದಿಯಾಗಿ ಜೈಲು ಸೇರಿದ್ದರು.
ಜೂನ್ 22ಕ್ಕೆ ನ್ಯಾಯಾಂಗ ಬಂಧನ ಜಾರಿಯಾಗಿತ್ತು. ಪರಪ್ಪನ ಅಗ್ರಹಾರ ಜೈಲಲ್ಲಿ ಪಾರ್ಟಿ ಮಾಡಿದ ಫೋಟೋ ವೈರಲ್ ಆದ ನಂತರ ಕೋರ್ಟ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿಸಿತ್ತು. 69 ದಿನ ಪರಪ್ಪನ ಅಗ್ರಹಾರದಲ್ಲಿ ಕಳೆದ ದರ್ಶನ್ ಆಗಸ್ಟ್ 29 ಕ್ಕೆ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. 5 ತಿಂಗಳಿನಿಂದ ಕಂಬಿ ಹಿಂದೆ ಕಾಲ ಕಳೆದಿದ್ದ ದರ್ಶನ್‌ಗೆ ಈಗ ಬಿಡುಗಡೆಯಾಗುವ ಭಾಗ್ಯ ಸಿಕ್ಕಿದೆ.