ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್ʼಗೆ 3300 ರೂ. ಬೆಲೆ ನಿಗದಿ
ಬೆಂಗಳೂರು: ರಾಜ್ಯದಾದ್ಯಂತ ಕಬ್ಬು ಬೆಲೆ ಹೆಚ್ಚಳಕ್ಕಾಗಿ ಹೋರಾಟ ನಡೆಸುತ್ತಿದ್ದ ರೈತರಿಗೆ ಕೊನೆಗೂ ಸರ್ಕಾರದಿಂದ ಭಾಗಶಃ ತೃಪ್ತಿ ದೊರಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,300 ಬೆಂಬಲ ಬೆಲೆ ನಿಗದಿಪಡಿಸುವ ತೀರ್ಮಾನ ಕೈಗೊಳ್ಳಲಾಗಿದೆ.
ರೈತರು ಆಗ್ರಹಿಸಿದ್ದ ₹3,500 ಬದಲಿಗೆ ಸರ್ಕಾರ ₹3,300 ದರ ನಿಗದಿಗೆ ಒಪ್ಪಿದೆ. ಇದರಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ₹3,150ಗೆ ರಾಜ್ಯ ಸರ್ಕಾರ ₹50 ಮತ್ತು ಸಕ್ಕರೆ ಕಾರ್ಖಾನೆಗಳು ₹50 ಸೇರಿಸುವ ಮೂಲಕ ಒಟ್ಟು ₹3,300 ನೀಡಲಾಗುವುದು.
ಕಳೆದ ಕೆಲವು ದಿನಗಳಿಂದ ಮಂಡ್ಯ, ಮೈಸೂರು, ಬೆಳಗಾವಿ, ಬಾಗಲಕೋಟೆ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಬ್ಬು ಬೆಲೆ ಹೆಚ್ಚಳಕ್ಕಾಗಿ ರೈತರು ರಸ್ತೆ ತಡೆ, ಧರಣಿ, ಟೈಯರ್ ಸುಡುವ ಪ್ರತಿಭಟನೆ ನಡೆಸುತ್ತಿದ್ದರು. ಬೆಳಗಾವಿಯಲ್ಲಿ ಹೋರಾಟ ಹಿಂಸಾತ್ಮಕ ರೂಪ ಪಡೆದು, ಸಾರ್ವಜನಿಕ ಆಸ್ತಿ ಹಾನಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳೂ ನಡೆದಿದ್ದವು.
ಈ ಹೋರಾಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ಸಭೆಗಳನ್ನು ಕರೆದಿತ್ತು. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ ಬೆಂಬಲ ಬೆಲೆ ನಿಗದಿಯ ತೀರ್ಮಾನ ಪ್ರಕಟಿಸಲಾಯಿತು.
ಮೊದಲ ಸುತ್ತಿನ ಸಭೆಯಲ್ಲಿ ಕಾರ್ಖಾನೆ ಮಾಲೀಕರು ₹3,200 ನೀಡಲು ಒಪ್ಪಿಕೊಂಡಿದ್ದರೂ, ರೈತರು ಅದನ್ನು ತಿರಸ್ಕರಿಸಿದ್ದರು. ಎರಡನೇ ಸುತ್ತಿನ ಚರ್ಚೆಯಲ್ಲಿ ಸಿಎಂ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಿ ₹3,300 ದರಕ್ಕೆ ಒಪ್ಪಿಸಲು ಯಶಸ್ವಿಯಾದರು.






