ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಮುಕ್ತ ಕಂಠದಿಂದ ಗುಣಗಾನ ಮಾಡಿರುವ ನ್ಯೂಜಿಲೆಂಡ್‌ನ ಅನುಭವಿ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್, ಹಿಟ್‌ಮ್ಯಾನ್ ಖ್ಯಾತಿಯ ಆಟಗಾರನ ನಾಯಕತ್ವದ ಅಡಿಯಲ್ಲಿ ಆಡುತ್ತಿರುವುದನ್ನು ಬಹಳಾ ಆನಂದಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ರೋಹಿತ್ ನಾಯಕತ್ವದಲ್ಲಿ 2013ರಲ್ಲಿ ಮೊದಲ ಬಾರಿ ಚಾಂಪಿಯನ್ಸ್ ಪಟ್ಟ ಪಡೆದ ಮುಂಬೈ ಇಂಡಿಯನ್ಸ್ ಬಳಿಕ ಒಟ್ಟು 5 ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಈ ಬಾರಿ ಪ್ರಶಸ್ತಿ ಗೆಲುವು ಸಾಧ್ಯವಾದರೆ ಹ್ಯಾಟ್ರಿಕ್ ಸಾಧನೆಯೊಂದಿಗೆ ದಾಖಲೆಯ 6ನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ. ಯುಎಇ ಆತಿಥ್ಯದಲ್ಲಿ ನಡೆದ ಐಪಿಎಲ್ 2020 ಟೂರ್ನಿಯಲ್ಲಿ ಮುಂಬೈ ಟ್ರೋಫಿ ಗೆಲ್ಲಲು ಬೌಲ್ಟ್ ಬಹುಮುಖ್ಯ ಪಾತ್ರ ವಹಿಸಿದ್ದರು. ಅಂದಿನಿಂದ ಮುಂಬೈ ತಂಡದ ಮುಂಚೂಣಿಯ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.
ಐಪಿಎಲ್ 2020 ಟೂರ್ನಿಯಲ್ಲಿ ಬೌಲ್ಟ್ ಒಟ್ಟು 25 ವಿಕೆಟ್‌ಗಳನ್ನು ಉರುಳಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ ಮೂರನೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಈ ಬಾರಿಯೂ ಅದೇ ಲಯ ಕಾಯ್ದುಕೊಂಡಿರುವ ಎಡಗೈ ವೇಗಿ ನಾಲ್ಕು ಪಂದ್ಯಗಳಲ್ಲಿ ಒಟ್ಟು 6 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
“ರೋಹಿತ್ ನಾಯಕತ್ವದಲ್ಲಿ ಒಂದು ಆವೃತ್ತಿ ಸಂಪೂರ್ಣವಾಗಿ ಆಡಿದ್ದೇನೆ. ಅವರ ಹೆಸರಲ್ಲಿ 5 ಐಪಿಎಲ್ ಟ್ರೋಫಿಗಳಿವೆ. ಇದರೊಂದಿಗೆ ಅಪಾರ ಅನುಭವವೂ ಸಿಕ್ಕಿದೆ. ಅವರಲ್ಲಿನ ಅತ್ಯುತ್ತಮ ಸಂಗತಿ ಏನೆಂದರೆ ಬಹಳಾ ಸುಲಭವಾಗಿ ನಮ್ಮ ತಂತ್ರಗಳನ್ನು ಚರ್ಚಿಸಬಹುದು. ಅವರೊಟ್ಟಿಗೆ ಮಾತನಾಡುವುದು ಸುಲಭ. ಜೊತೆಗೆ ಆಟಗಾರರಿಗೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯತಂತ್ರಗಳನ್ನು ಬಳಕೆಗೆ ತರಲು ಬೆಂಬಲ ನೀಡುತ್ತಾರೆ. ಅತ್ಯಂತ ಧನಾತ್ಮಕ ಮನಸ್ಥಿತಿಯ ನಾಯಕ ಅವರು. ಅವರ ನಾಯಕತ್ವದ ಅಡಿಯಲ್ಲಿ ಆಡುತ್ತಿರುವುದನ್ನು ಬಹಳಾ ಆನಂದಿಸಿದ್ದೇನೆ,” ಎಂದು ಬೌಲ್ಟ್ ಹೇಳಿದ್ದಾರೆ.