ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತು ಬೆಂಗಳೂರಿನಲ್ಲಿ ಬೇಕಾದಷ್ಟು ನಡೆಯುತ್ತಿದೆ. ಮಾತನಾಡುವುದಕ್ಕೆ ಬೇಕಾದಷ್ಟು ವಿಷಯ ಇದೆ. ಜನ 70, 80 ವರ್ಷಗಳ ಕಾಲ ಕಷ್ಟಪಟ್ಟು ಸಂಪಾದನೆ ಮಾಡಿ ಆಸ್ತಿಯನ್ನ ದೋಚುತ್ತಿದ್ದಾರೆ. ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ. ಇದಕ್ಕೆಲ್ಲ ಅಂತ್ಯ ಹಾಡುವ ಕಾಲ ಬರುತ್ತದೆ ಎಂದು ಅವರು ಹೇಳಿದರು.
ಮಧ್ಯಂತರ ಚುನಾವಣೆಗೆ ನಾವು ರೆಡಿ ಎಂಬ ಆರ್.ಅಶೋಕ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಅವರು ಸಿದ್ಧ ಎಂದರೆ ನಾವು ಸಿದ್ಧವೇ. ಚುನಾವಣೆ ಬಂದರೆ ಎದುರಿಸಬೇಕಲ್ಲವೇ? ಸರ್ಕಾರ ಬಿದ್ದುಹೋದರೆ ನಾವು ತಯಾರು ಆಗಬೇಕು.
ನಮ್ಮದು ಜವಾಬ್ದಾರಿ ಇದೆ. ಆದರೆ, ನಾನು ಮಧ್ಯಂತರ ಚುನಾವಣೆಯ ಬಗ್ಗೆ ಚರ್ಚೆ ಮಾಡೋಕೆ ಹೋಗಲ್ಲ. ಈ ಸರ್ಕಾರಕ್ಕೆ ಸಂಪೂರ್ಣ 136 ಶಾಸಕರು ಇದ್ದಾರೆ. ಅವರಲ್ಲಿರುವ ಭಿನ್ನಮತ ಬಗೆಹರಿಸಿಕೊಂಡರೆ ಸರ್ಕಾರ ಪೂರ್ಣಾವಧಿ ಕಾಲ ಇರುತ್ತದೆ. ಇಲ್ಲವಾದರೆ ಹೋಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಅವಧಿ ಮುಕ್ತಾಯ ಆಗಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಸಮೀಕ್ಷೆಯಿಂದ ಏನು ಸಾಧನೆ ಮಾಡುತ್ತಾರೆ ಇವರು? ಅದರಲ್ಲಿ ಎಷ್ಟರಮಟ್ಟಿಗೆ ಸಮೀಕ್ಷೆ ನಡೆಸಿದ್ದಾರೆ? ಎಷ್ಟರಮಟ್ಟಿಗೆ ಜನ ಆ ಸಮೀಕ್ಷೆಗೆ ಸ್ಪಂದಿಸಿದ್ದಾರೆ? ಸಮಾಜದಲ್ಲಿ ಯಾರೆಲ್ಲಾ ಬಡತನದಲ್ಲಿ ಇದ್ದಾರೆ ಎನ್ನುವುದು ಗಮನಿಸಬೇಕು. ಇಲ್ಲಿ ಜಾತಿ ಪ್ರಶ್ನೆ ಅಲ್ಲ. ಎಲ್ಲ ಜಾತಿಯಲ್ಲಿಯು ಬಡವರಿದ್ದಾರೆ. ಮೊದಲು ಶಿಕ್ಷಣ ಕೋಡುವ ಕೆಲಸ ಮಾಡಬೇಕು. ಇವತ್ತು ರಾಜ್ಯದಲ್ಲಿ 63 ಸಾವಿರ ಶಿಕ್ಷಕರ ಕೊರತೆ ಇದೆ ಎನ್ನುವ ಮಾಧ್ಯಮ ವರದಿ ನೋಡಿದೆ.
ನಿಮ್ಮ ಬೆಂಗಳೂರು ನಗರ ವಿವಿಯಲ್ಲಿ ಶೇ.94ರಷ್ಟು ಬೋಧಕರ ಹುದ್ದೆಗಳು ಖಾಲಿ ಇವೆ ಎನ್ನುವ ಮಾಧ್ಯಮ ವರದಿಯನ್ನು ಗಮನಿಸಿದೆ. ಅಲ್ಲೆಲ್ಲ ಹುದ್ದೆಗಳನ್ನು ಖಾಲಿ ಬಿಟ್ಟು ಸರ್ಕಾರ ಯಾವ ಸಮೀಕ್ಷೆ ಮಾಡಿ ಏನು ಸಾಧನೆ ಮಾಡುತ್ತೆ. ಸರ್ಕಾರದಲ್ಲಿ ಹಲವಾರು ಲೋಪದೋಷಗಳು ಇವೆ. ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾಗಳಿಗೆ ಮಾಡಿರುವ ಸಮೀಕ್ಷೆ ಇದು. ನಾಡಿನ ಜನತೆ ಉದ್ದಾರಕ್ಕೆ ಮಾಡಿರೋ ಸಮೀಕ್ಷೆ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.






