ಲಾಕ್ ಡೌನ್ ಕೇರ್ ಮಾಡದೇ ನಮಾಜ್!

0
27

ಬೀದರ್, ಮೇ 29: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಬೀದರ್ ಜಿಲ್ಲೆ ಹುಲಸೂರು ತಾಲ್ಲೂಕು ಕೇಂದ್ರದ ಮಸೀದಿಯೊಂದರಲ್ಲಿ ಸಾಮೂಹಿಕ ನಮಾಜ್(ಪ್ರಾರ್ಥನೆ) ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡ ಬಸವಕಲ್ಯಾಣ ತಹಶೀಲ್ದಾರ ನೇತೃತ್ವದ ತಂಡ ಮಸೀದಿ ಮೇಲೆ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

 

ಹುಲಸೂರು ಪಟ್ಟಣದ ಖುರೇಶಿ ಗಲ್ಲಿಯಲ್ಲಿರುವ ಮಸಿದಿಯಲ್ಲಿ ಸುಮಾರು 50ಕ್ಕೂ ಅಧಿಕ ಜನ ಸಾಮೂಹಿಕ ನಮಾಜ್ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ ಶಿವಾನಂದ ಮೇತ್ರೆ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನ ಮಸೀದಿ ಮೇಲೆ ದಿಢೀರನೆ ದಾಳಿ ನಡೆಸಿದರು. ಅಧಿಕಾರಿಗಳ ತಂಡವು ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಮಾಜ್‌ನಲ್ಲಿ ನಿರತವಾಗಿದ್ದವರನ್ನು ತರಾಟೆಗೆ ತಗೆದುಕೊಂಡ ಪ್ರಸಂಗ ಜರುಗಿತು.

 

ಹುಲಸೂರು ಪಟ್ಟಣ ಸೇರಿದಂತೆ ದೇಶದಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೊನಾ ಸೋಂಕಿನಿಂದ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರದಿಂದ ಲಾಕ್‌ಡೌನ್ ಜಾರಿಗೊಳಿಸಿ, ನಮಾಜ್ ಸೇರಿದಂತೆ ಎಲ್ಲಾ ಧಾರ್ಮಿಕ ಸಭೆ-ಸಮಾರಂಗಳನ್ನು ರದ್ದುಪಡಿಸಿದೆ. ಜನರನ್ನು ಸೇರಿಸಿ ನಮಾಜ್ ಮಾಡಬಾರದು ಎನ್ನುವುದು ಗೊತ್ತಿದ್ದರೂ ಹತ್ತಾರು ಜನರೊಂದಿಗೆ ಸೇರಿ ನಮಾಜ್ ಮಾಡುತ್ತಿರುವುದು ಯಾಕೆ ಎಂದು ಮಸೀದಿ ಇಮಾಮ್‌ರನ್ನು ತಹಶೀಲ್ದಾರರು ಪ್ರಶ್ನಿಸಿದರು.

 

ನಮಾಜ್ ಮಾಡುವಾಗ ತಹಶೀಲ್ದಾರ ಸೇರಿದಂತೆ ಅಧಿಕಾರಿಗಳು ಮಸೀದಿಗೆ ಪ್ರವೇಶಿಸಿದರೂ ಸಹ ಕ್ಯಾರೆ ಎನ್ನದ ಜನರು, ನಮಾಜ್‌ನಲ್ಲಿ ನಿರತವಾಗಿದ್ದರು. ಕೆಲ ಕ್ಷಣ ಇದನ್ನು ಗಮನಿಸಿದ ತಹಶೀಲ್ದಾರ ಶಿವಾನಂದ ಮೇತ್ರೆ, ಪ್ರಥಮ ಸಾಲಿನಲ್ಲಿ ನಮಾಜ್ ಮಾಡುತ್ತಿದ್ದ ಮಸೀದಿ ಇಮಾಮ್ ಬಳಿ ತೆರಳಿ ತರಾಟೆಗೆ ತಗೆದುಕೊಳ್ಳುವುದನ್ನು ಗಮನಿಸಿದ ಇತರರು ಸ್ಥಳದಿಂದ ನಿರ್ಗಮಿಸಿದರು. ತಾ.ಪಂ ಇಒ ಖಾಲೇದ್ ಅಲಿ ಸೇರಿದಂತೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here