ಕೊರೋನಾದಿಂದ ದೇಶ ದೊಡ್ಡಮಟ್ಟಿನ ಸಮಸ್ಯೆಗೆ ಸಿಲುಕುವುದನ್ನು ತಪ್ಪಿಸಲು ಅನಿವಾರ್ಯವಾಗಿ ಲಾಕ್ ಡೌನ್ ಮೊರೆ ಹೋಗಲಾಗಿದೆ. ಪ್ರತಿಯೊಬ್ಬರು ಮನೆಯಲ್ಲಿ ಕಾಲಕಳೆಯುವಂತಾಗಿದೆ. ಲಾಕ್ ಡೌನ್ ಕೊರೋನಾ ವಿರುದ್ಧದ ಸಮರವಾದರೂ ಅದರಿಂದ ಪ್ರತಿಯೊಬ್ಬರು ನಲುಗಿದ್ದೇವೆ. ದುಡಿಮೆ ಇಲ್ಲದಾಗಿದೆ. ಇಡೀ ದೇಶದ ಆರ್ಥಿಕತೆಗೂ ಬಲವಾದ ಪೆಟ್ಟು ಬಿದ್ದಿದೆ. ವಲಸೆ ಕಾರ್ಮಿಕರು , ದಿನಗೂಲಿ ನೌಕರರ ಪಾಡು ಹೇಳತೀರದಾಗಿದೆ. ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಇಂಥಾ ಕಾರ್ಮಿಕರ ನೆರವಿಗೆ ದೇಶದ ಅತಿ ದೊಡ್ಡ ಆಹಾರ ಪೂರೈಕೆ ಆನ್ ಲೈನ್ ವೇದಿಕೆ Swiggy ಮುಂದಾಗಿದೆ. ವಲಸೆ ಕಾರ್ಮಿಕರು, ದಿನಗೂಲಿ ನೌಕರರ ನೆರವಿಗೆ ನಿಂತಿರುವ ಸ್ವಿಗ್ಗಿ ಅವರಿಗೆ ನಿರಾಶ್ರಿತರಿಗರ ಉಚಿತ ಆಹಾರ ಪೂರೈಕೆ ಮಾಡುವುದಾಗಿ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ವಿವಿಧ ವಾಣಿಜ್ಯ ಆಹಾರ ಕಿಚನ್ ಗಳು, ಎನ್ ಜಿ ಒಗಳು ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಕೈ ಜೋಡಿಸಿರುವ ಸ್ವಿಗ್ಗಿ ಕಳೆದ ವಾರ ನವದೆಹಲಿಯಲ್ಲಿ ಸರ್ಕಾರದ ಬೆಂಬಲದೊಂದಿಗೆ ‘ಭರವಸೆ, ಹಸಿವಿಲ್ಲ’ ( ಹೋಪ್ ನಾಟ್ ಹಂಗರ್) ಎಂಬ ಘೋಷಣೆಯಡಿ ಅಲ್ಲಿನ ನಿರಾಶ್ರಿತ ಶಿಬಿರಗಳಲ್ಲಿನ ಜನರಿಗೆ ದಿನದ ಎರಡು ಹೊತ್ತು ಪೌಷ್ಟಿಕ ಆಹಾರ ತಯಾರಿಸಿ ವಿತರಿಸಲು ಮುಂದಾಗಿದೆ. ಕಂಪಾಸ್ ಕಿಚನ್ಸ್, ಲೈಟ್ ಬೈಟ್ ಫುಡ್ಸ್ ಮತ್ತು ಸ್ಮಾರ್ಟ್ ಕ್ಯೂ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿ ಈ ಕೆಲಸ ಮಾಡುತ್ತಿದೆ. ಮುಂಬೈನಲ್ಲಿ ಪ್ರಥಮ್ ಹೆಲ್ಪ್ ಏಜ್ ಇಂಡಿಯಾ ಮತ್ತು ಯುವದೊಂದಿಗೆ ಕೈಜೋಡಿಸಿದ್ದು, ಎಲಿಮೋರ್ ಇಂಡಿಯಾ ಆಹಾರ ಪಾಲುದಾರವಾಗಿ ಸಾಥ್ ನೀಡಿದೆ. ಬೆಂಗಳೂರು, ಹೈದರಾಬಾದ್ , ಗುರುಗ್ರಾಮ, ಚೆನ್ನೈಮತ್ತು ಕೋಲ್ಕತ್ತಾ ನಗರಗಳಿಗೂ ವಿಸ್ತರಿಸಿದ್ದು ಈ ಭಾಗಗಳಲ್ಲೆಲ್ಲಾ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಇದುವರೆಗೆ 2.50 ಲಕ್ಷ ಆಹಾರ ಪೊಟ್ಟಣಗಳನ್ನು ಪೂರೈಸಿರುವ ಸ್ವಿಗ್ಗಿ ಪ್ರತಿನಿತ್ಯ 5 ಲಕ್ಷ ಆಹಾರ ಪೂರೈಸುವ ಗುರಿಹೊಂದಿದೆ. ಒಟ್ಟಿನಲ್ಲಿ ಕೊರೋನಾ ಎಮರ್ಜೆನ್ಸಿ ದೆಸೆಯಿಂದ ಹಸಿದವರ ಹಸಿವು ನೀಗಿಸುವ ಕೆಲಸವನ್ನು ಪ್ರತಿಷ್ಠಿತ ಸ್ವಿಗ್ಗಿ ಮಾಡುತ್ತಿರುವುದು ಶ್ಲಾಘನೀಯ.