ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆಗೆ ಹೆಸರಾದ ಮಹಾನ್ ವ್ಯಕ್ತಿ. ಭಾರತ ಮಾತ್ರವಲ್ಲ ಜಗತ್ತಿನ ಯಾವ ದೇಶದ ಇತಿಹಾಸದಲ್ಲೂ ಇಂತಹ ವ್ಯಕ್ತಿಯನ್ನು ನೋಡಲು ಸಾಧ್ಯವಿಲ್ಲ. ದೇಶಕ್ಕೆ ಇವರಂತಹ ನಾಯಕರು ಬೇಕೆಂದೆನಿಸಿದರೂ ಇಂತಹ ನಾಯಕರು ಉದಯಿಸುವುದು ಕನಸಿನ ಮಾತೇ ಸರಿ. ಇವರಿಗೆ ಇವರೇ ಸರಿಸಾಟಿ. ನಮ್ಮ ದೇಶದ ಹೆಮ್ಮೆಯ ನಾಯಕ, ಎರಡನೇ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀಜಿ.
ಅಮೇರಿಕಾಕ್ಕೆ ಕ್ಯಾರೇ ಎನ್ನದೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಧೀಮಂತ ನಾಯಕ. ಮಹಾತ್ಮಾ ಗಾಂಧೀಜಿ ಹಾಗೂ ಜವಹಾರ್ ಲಾಲ್ ನೆಹರು ಅವರ ನಂತರ ದೇಶಕ್ಕೆ ಸಮರ್ಥನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರವಾದವರು ಲಾಲ್ ಬಹುದ್ದೂರ್ ಶಾಸ್ತ್ರಿ. ತುಂಬಾ ಸರಳ ಹಾಗೂ ಮೃದು ವ್ಯಕ್ತಿತ್ವದ ಇವರಿಂದ ದೇಶವನ್ನು ಮುನ್ನೆಡಸಲು ಆಗುತ್ತದೆಯೇ ಎಂಬ ಪ್ರಶ್ನೆಗೆ ಕೆಚ್ಚೆದೆಯ ಆಡಳಿತದಿಂದಲೇ ಉತ್ತರಿಸಿದ ನಾಯಕರಿವರು.
ಅದು 1962ನೇ ಇಸವಿ, ಚೀನಾ ಭಾರತದ ಉತ್ತರ ಗಡಿಯನ್ನು ಆಕ್ರಮಿಸಿತು. ಇನ್ನೊಂದೆಡೆ ಪಾಕಿಸ್ತಾನ ದೊಡ್ಡ ತಲೆನೋವಾಗಿತ್ತು. ಆಗ ದೇಶದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಐಕ್ಯತೆಯಿಂದ ಇರಬೇಕಾಗಿತ್ತು. ಅಂದು ಗೃಹ ಸಚಿವರಾಗಿದ್ದ ಲಾಲ್ ಬಹುದ್ದೂರ್ ಶಾಸ್ತ್ರೀಜಿ ಭಾವೈಕ್ಯತೆ ಸಾಧಿಸಲು ಶ್ರಮಿಸಿದರು.
ದೇಶವನ್ನು ಸಂಘಟಿಸಬೇಕಾದ ಹೊತ್ತಲ್ಲಿ ಕೆಲವರು ಅಧಿಕಾರ, ಮಂತ್ರಿ ಪದವಿಗೆ ಅಂಟಿಕೊಂಡಿರುವುದನ್ನೇ ತಮ್ಮ ಜೀವನದ ಪ್ರಮುಖ ಗುರಿ ಎಂಬಂತೆ ವರ್ತಿಸುತ್ತಿದ್ದರು. ಈ ಸಮಯದಲ್ಲಿ ದೇಶದ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳು, ಕೇಂದ್ರದ ಹಿರಿಯ ಸಚಿವರುಗಳು ಪ್ರಧಾನಿ ನೆಹರೂ ಅವರಿಗೆ ರಾಜೀನಾಮೆ ನೀಡಬೇಕು. ನೆಹರು ಅವರು ಹೇಳಿದವರು ಮಾತ್ರ ಮಂತ್ರಿಗಳಾಗಿ ಮುಂದುವರೆಯುವುದು, ಅವರು ವಹಿಸಿದ ಜವಬ್ದಾರಿ ನಿಭಾಯಿಸಬೇಕು ಎಂಬ ತೀರ್ಮಾನ ಕೈಗೊಳ್ಳಲಾಯಿತು. ಅವತ್ತು ಲಾಲ್ ಬಹುದ್ದೂರ್ ಶಾಸ್ತ್ರಿಗಳು ಮಂತ್ರಿಗಳಾಗಿ ಮುಂದುವರೆಯಬೇಕು ಎಂದು ನೆಹರು ಅವರು ಬಯಸಿದ್ದರೂ ಶಾಸ್ತ್ರಿಗಳು ಒಪ್ಪಲಿಲ್ಲ. ತಾವು ರಾಜೀನಾಮೆ ನೀಡಿದರು.
ಆಮೇಲೆ ಜವಹಾರ್ ಲಾಲ್ ನೆಹರು ಅವರ ನಂತರ ಶಾಸ್ತ್ರೀಜಿ 1964 ಜೂನ್ 9ರಂದು ಪ್ರಧಾನಮಂತ್ರಿಯಾಗಿ ಅಧಿಕಾರವಹಿಸಿಕೊಂಡರು. ಆ ಸಂದರ್ಭದಲ್ಲಿ ಭಾರತದ ಪರಿಸ್ಥಿತಿ ತುಂಬಾನೇ ಕ್ಲಿಷ್ಟಕರವಾಗಿತ್ತು.
ಇದೇ ಸಮಯದಲ್ಲಿ ಪಾಕಿಸ್ತಾನ ಕಾಶ್ಮೀರದೆಡೆಗೆ ನುಗ್ಗಿತು. ಅಂದು ರಾತ್ರಿ ಶಾಸ್ತ್ರೀಜಿ ಮನೆಗೆ ಊಟಕ್ಕೆ ಬಂದಿದ್ದರು. ಆ ವೇಳೆ ಮಿಲಟರಿ ಅಧಿಕಾರಿಗಳು ತುರ್ತಾಗಿ ಶಾಸ್ತ್ರೀಜಿ ಅವರನ್ನು ಭೇಟಿ ಮಾಡಿ, ‘ಪಾಕಿಗಳು ಕಾಶ್ಮೀರದ ಕಡೆಗೆ ಆಕ್ರಮಣ ಮಾಡಿದ್ದಾರೆ. ನಾವು ಅವರ ದಿಕ್ಕುತಪ್ಪಿಸಲು ಲಾಹೋರ್ ನತ್ತ ನುಗ್ಗ ಬೇಕು’ ಎಂದರು. ಅಧಿಕಾರಿಗಳ ಮಾತನ್ನು ಅಲ್ಲಗಳೆಯದೆ, ಕೂಡಲೇ ಹೊರಡಿ ಲಾಹೋರ್ ಕಡೆಗೆ. ಲಾಹೋರ್ ನತ್ತ ನುಗ್ಗುವುದು ಅಂತಾರಾಷ್ಟ್ರೀಯ ಗಡಿ ದಾಟಿದಂತೆ. ಪರವಾಗಿಲ್ಲ, ಅವರು ಕಾಶ್ಮೀರಕ್ಕೆ ನುಗ್ಗಿಲ್ಲವೇ, ನಾವು ಲಾಹೋರ್‍ಗೆ ನುಗ್ಗೋಣ’ ಎಂದು ಹೇಳಿಯೇ ಬಿಟ್ಟರು. ಕೇವಲ 10 ನಿಮಿಷದಲ್ಲಿ ಇಂತಹದೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದರು ಎಂದರೆ ನೀವೇ ಲೆಕ್ಕಹಾಕಿ ಇವರ ನಾಯಕತ್ವ ಎಂತಹದ್ದು ಅಂತ.
ಈ ಸಮಯದಲ್ಲಿ ಅಮೇರಿಕಾದಿಂದ ಭಾರತಕ್ಕೆ ಗೋಧಿ ಪೂರೈಕೆ ಆಗುತ್ತಿತ್ತು. ಈ ಗೋಧಿ ತೀರಾ ಕಳಪೆ ಗುಣಮಟ್ಟದ್ದು. ಇಂತಹ ಗೋಧಿಯನ್ನು ತಿನ್ನುವುದಕ್ಕಿಂತ ಉಪವಾಸ ಇದ್ದು ಬಿಡೋಣ ಅಂತ ಶಾಸ್ತ್ರೀಜಿ ಕರೆಕೊಟ್ಟಿದ್ದರು. ನೆನಪಿರಲಿ, ಇವರು ಹೀಗೆ ಕರೆ ನೀಡುವ ಮುನ್ನ ತಮ್ಮ ಮನೆಯಲ್ಲಿ ರಾತ್ರಿ ಅಡುಗೆ ಮಾಡದಂತೆ ಸೂಚಿಸಿದ್ದರು!
ಇದೇ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸದೇ ಇದ್ದಲ್ಲಿ ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆ ಎಂದು ಅಮೇರಿಕಾ ಹೇಳಿತು. ಅದಕ್ಕೆ ನೇರವಾಗಿಯೇ ದಿಟ್ಟ ಉತ್ತರ ನೀಡಿದ ಪ್ರಧಾನಿ ಶಾಸ್ತ್ರೀಜಿ, ನಿಲ್ಲಿಸಿ ತೊಂದರೆ ಏನೂ ಇಲ್ಲ’ ಎಂದು ಖಡಕ್ ಆಗಿಯೇ ಉತ್ತರಿಸಿದರು. ತಿನ್ನಲೇನು ಮಾಡ್ತೀರಾ ಅಂತ ಅಮೇರಿಕಾ ಕೇಳ್ತು. ಆ ಯೋಚನೆ ನಿಮಗೆ ಬೇಡ ಅಂದ್ರು ಶಾಸ್ತ್ರೀಜಿ. ‘ಆಹಾರವಿಲ್ಲದೆ ಭಾರತೀಯರು ಸಾಯ್ತಾರೆ’ ಎಂದು ವ್ಯಂಗವಾಡಿತು ಅಮೇರಿಕಾ! ಆಗ, ಲಾಲ್ ಬಹುದ್ದೂರ್ ಶಾಸ್ತ್ರಿಗಳು, ‘ಹಣ ನೀಡಿ ನಿಮ್ಮ ಕಳಪೆಗುಣಮಟ್ಟದ ಗೋಧಿ ತಿಂದು ಸಾಯುವುದಕ್ಕಿಂತ ಹಸಿವಿನಿಂದ ಸಾಯುವುದೇ ಲೇಸು. ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ’ ಎಂದು ಅಮೇರಿಕಾಕ್ಕೆ ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳಿದರು.
ದೇಶದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಸ್ತ್ರಕ್ಕೆ ಅಸ್ತ್ರದಲ್ಲೇ ಪ್ರತ್ಯುತ್ತರ ನೀಡುತ್ತೇವೆ. ನಮ್ಮ ದೇಶವಿದ್ದರೆ ನಮ್ಮ ತಿರಂಗವೂ ಇರುತ್ತದೆ’ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ‘ ಜೈ ಜವಾನ್ ಜೈ ಕಿಸಾನ್ ಎಂದು ಘೋಷಣೆ ಹೊರಡಿಸುವ ಮುಖೇನ ದೇಶದ ಜನರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ. ಅಮೇರಿಕಾದಿಂದ ಗೋಧಿ ಬರುತ್ತಿಲ್ಲ. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಅಷ್ಟೇ ಅಲ್ಲ ಮಾತು ಮುಂದುವರೆಸಿ, ನೀವು ನೇರವಾಗಿ ನಮ್ಮ ಸೇನೆಗೆ ಧನ ಸಹಾಯ ಅಥವಾ ಆಹಾರದ ಸಾಹಯವನ್ನು ಮಾಡಬಹುದು. ಇಲ್ಲವೆ ಪ್ರತಿ ಸೋಮವಾರ ಉಪವಾಸ ವ್ರತ ಆಚರಿಸುವ ಮೂಲಕ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಲು ಸಹಕರಿಸಿ. ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾದೀತು ಎಂದರು. ದೇಶದ ಜನ ಶಾಸ್ತ್ರೀಜಿಯವರನ್ನು ಬೆಂಬಲಿಸಿದರು.
ಶಾಸ್ತ್ರೀಜಿ ಕೇವಲ ಜನತೆಗೆ ಹೇಳಿ ಸುಮ್ಮನೆ ಕೂರಲಿಲ್ಲ. ತಾವೂ ಕೂಡ ಅದನ್ನು ಅನುಸರಿಸಿದರು. ಇವರು ಕೂಡ ಸೋಮವಾರ ಉಪವಾಸ ಆರಂಭಿಸಿದರು. ಮನೆ ಕೆಲಸದವಳಿಗೆ ಕೊಡುವ ಹಣವನ್ನು ದೇಶಕ್ಕಾಗಿ ಉಪಯೋಗಿಸಬಹುದೆಂದು, ಮನೆ ಕೆಲಸಕ್ಕೆ ಬರುತ್ತಿದ್ದ ಕೆಲಸದಾಕೆಯನ್ನು ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿದರು. ಪತ್ನಿ ಲಲಿತಾದೇವಿ ಅವರ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗ ಕೆಲಸದಾಕೆಯ ಬದಲು ಶಾಸ್ತ್ರೀಜಿಯವರೇ ಮನೆಕೆಲಸ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ತಮ್ಮ ಮಕ್ಕಳಿಗೆ ಇಂಗ್ಲಿಷ್ ಮನೆಪಾಠ ಹೇಳಿಕೊಡಲು ಬರುತ್ತಿದ್ದ ಶಿಕ್ಷಕರನ್ನೂ ಬೇಡ ಎಂದು ಹೇಳಿ, ಅವರಿಗೆ ನೀಡುತ್ತಿದ್ದ ಸಂಬಳದ ಹಣವನ್ನು ದೇಶಕ್ಕಾಗಿ ಬಳಸುವ ಮನಸ್ಸು ಮಾಡಿದ ಅಪ್ಪಟ ದೇಶಭಕ್ತ ನಾಯಕರು ಲಾಲ್ ಬಹುದ್ದೂರ್ ಶಾಸ್ತ್ರೀಜಿ.