ಲೇಡಿ ಫಿಟ್ನೆಸ್ ಇನ್ಫ್ಲೂಯೆನ್ಸರ್‌ಗೆ ಇನ್ಸ್ಟಾಗ್ರಾಂನಲ್ಲಿ ಕಿರುಕುಳ: ಹರಿಯಾಣದಿಂದ ಬಂದು ಬೆಂಗಳೂರಿನಲ್ಲಿ ಆರೋಪಿ ಅರೆಸ್ಟ್
ಬೆಂಗಳೂರಿನ ಲೇಡಿ ಫಿಟ್ನೆಸ್ ಇನ್ಫ್ಲೂಯೆನ್ಸರ್ ಒಬ್ಬರಿಗೆ ಇನ್ಸ್ಟಾಗ್ರಾಂ ಮೂಲಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಮೂಲದ ಸುಧೀರ್ ಕುಮಾರ್ ಎಂಬಾತನಿಂದ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ, ಬೆಂಗಳೂರಿನಲ್ಲಿ ಲೇಡಿ ಫಿಟ್ನೆಸ್ ಹಾಗೂ ನ್ಯೂಟ್ರೀಷಿಯನ್ ಇನ್ಫ್ಲೂಯೆನ್ಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯನ್ನು ಇನ್ಸ್ಟಾಗ್ರಾಂನಲ್ಲಿ ನೋಡಿ ಫಾಲೋ ಮಾಡಲು ಆರಂಭಿಸಿದ್ದಾನೆ. ಬಳಿಕ ಅಶ್ಲೀಲ ಹಾಗೂ ಲೈಂಗಿಕವಾಗಿ ಪ್ರಚೋದಿಸುವ ಮೆಸೇಜ್‌ಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ, ವಾಟ್ಸಾಪ್ ಮೂಲಕ ಯುವತಿಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ ಎನ್ನಲಾಗಿದೆ. ಹರಿಯಾಣದಲ್ಲಿರುವಾಗಲೇ ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಸಾಧಿಸಿದ್ದ ಸುಧೀರ್ ಕುಮಾರ್, ಮಹಿಳೆಯನ್ನು ಬೆಂಬಿಡದೆ ಕಾಡಲು ಆರಂಭಿಸಿದ್ದಾನೆ.
ಹಿಂಸೆ ಮಿತಿ ಮೀರುತ್ತಿದ್ದಂತೆ ಆರೋಪಿ ಹರಿಯಾಣದಿಂದ ಕರ್ನಾಟಕಕ್ಕೆ ಪ್ರಯಾಣ ಮಾಡಿ, ಬೆಂಗಳೂರಿಗೆ ಬಂದಿದ್ದಾನೆ. ಇಲ್ಲಿ ಜಿಮ್ ಹಾಗೂ ಮಹಿಳೆಯ ಸಹೋದ್ಯೋಗಿಗಳ ಬಳಿ ಮಾಹಿತಿ ಕಲೆ ಹಾಕಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಇನ್ಫ್ಲೂಯೆನ್ಸರ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ದಕ್ಷಿಣ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸದ್ಯ ಆರೋಪಿಯನ್ನು ಬಂಧನದಲ್ಲಿರಿಸಿ ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲೇಡಿ ಫಿಟ್ನೆಸ್ ಇನ್ಫ್ಲೂಯೆನ್ಸರ್‌ಗೆ ಇನ್ಸ್ಟಾಗ್ರಾಂನಲ್ಲಿ ಕಿರುಕುಳ
Date:






