ಲೋಕಸಭೆ ಚುನಾವಣೆ: ಇಂದು ಸಂಜೆಯಿಂದ ಮದ್ಯ ಮಾರಾಟ ನಿಷೇಧ!

0
27

ಬೆಂಗಳೂರು: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಮತದಾನ ನಡೆಯುವ ಬೆಂಗಳೂರಿನ ಎಂಟೂ ವಿಭಾಗಗಳಲ್ಲಿಯೂ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಿದ್ದೇವೆ. ಐದು ಲೋಕಸಭಾ ಕ್ಷೇತ್ರಗಳು ನಮ್ಮ ವ್ಯಾಪ್ತಿಗೆ ಬರುತ್ತವೆ. ಬೆಂಗಳೂರಿನಲ್ಲಿ ಮತದಾನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಸಂಜೆ 6ರಿಂದ ಏ.26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಪೊಲೀಸ್ ಆಯುಕ್ತ ದಯಾನಂದ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ದಯಾನಂದ್, ಯಾವುದೇ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಐದಕ್ಕು ಹೆಚ್ಚು ಜನರು ಒಂದೇ ಕಡೆ ಸೇರುವಂತಿಲ್ಲ. ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆಗೂ ಅವಕಾಶ ಇರುವುದಿಲ್ಲ.
ಸಂಜೆ 6ರಿಂದ ಏ.26ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧವಿರುತ್ತದೆ. ಮುಕ್ತ, ನಿರ್ಭೀತ, ನಿಷ್ಕಲ್ಮಷ ಮತದಾನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ನಗರದ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನ ಭದ್ರತೆಗೆ ಬಳಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ 13 ಸಾವಿರಕ್ಕೂ ಅಧಿಕ ಪೊಲೀಸರು, 11 ಸಿಆರ್ಪಿಎಫ್, 14 ಕೆಎಸ್ಆರ್ಪಿ, 40 CAR ತುಕಡಿಯನ್ನು ನಿಯೋಜಿಸಲಾಗುತ್ತದೆ ಎಂದರು.