ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!
ನವದೆಹಲಿ:- ದೇಶದಲ್ಲಿ ಪ್ರತಿ ತಿಂಗಳ ಮೊದಲನೇ ತಾರೀಖಿನಂದೇ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ ನವೆಂಬರ್ ತಿಂಗಳಿಗೂ ಎಲ್‌ಪಿಜಿ ಬೆಲೆ ಪರಿಷ್ಕರಣೆ ಆಗಿದ್ದು, ಈ ಬಾರಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಸಣ್ಣ ಮಟ್ಟಿನ ಇಳಿಕೆ ಕಂಡು ಬಂದಿದೆ.
ವಾಣಿಜ್ಯ ಸಿಲಿಂಡರ್ ದರ ಇಳಿಕೆ:
19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‌ಗೆ ₹5 ಕಡಿಮೆಯಾಗಿದೆ. ದೆಹಲಿಯಲ್ಲಿ ಈಗ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹1,590 ಆಗಿದ್ದು, ಸೆಪ್ಟೆಂಬರ್‌ನಲ್ಲಿ ಈ ಬೆಲೆ ₹15 ಏರಿಕೆಯಾಗಿತ್ತು. ಈಗ ₹5 ಇಳಿಕೆಯಾಗಿದೆ.
ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹6.5 ಇಳಿಕೆಯಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ ಇಳಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಕ್ಯಾಟರಿಂಗ್ ಸೇವಾ ವಲಯಗಳಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಗೃಹ ಬಳಕೆ ಸಿಲಿಂಡರ್ ದರದಲ್ಲಿ ಬದಲಾವಣೆ ಇಲ್ಲ:
ಇನ್ನೊಂದೆಡೆ, ಗೃಹ ಬಳಕೆಯ 14.5 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂದರೆ, ನವೆಂಬರ್ ತಿಂಗಳಿಗೂ ಗೃಹ ಬಳಕೆಯ ಸಿಲಿಂಡರ್ ಬೆಲೆ ಯಥಾಸ್ಥಿತಿಯಲ್ಲೇ ಮುಂದುವರಿದಿದೆ ಎನ್ನಲಾಗಿದೆ.






