ಬಾಲಿವುಡ್ ಬಹುಬೇಡಿಕೆಯ ನಟಿಯರಲ್ಲಿ ಯಾಮಿ ಗೌತಮ್ ಕೂಡ ಒಬ್ಬರು. ಇತ್ತೀಚಿಗಷ್ಟೆ ಹಣೆಮಣೆ ಏರಿರುವ ನಟಿ ಯಾಮಿ ಗೌತಮ್ ವಾಸಿಯಾಗದ ಚರ್ಮರೋಗದಿಂದ ಬಳಲುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ನಟಿಮಣಿಯರು ತಮ್ಮ ತ್ವಚೆಯನ್ನು ಸುಂದರವಾಗಿ ಇಟ್ಟುಕೊಳ್ಳಲು ಹರಸಾಹಸ ಪಡುಪತ್ತಿರುತ್ತಾರೆ. ಆದರೆ ಯಾಮಿಗೌತಮ್ ಅವರಿಗೆ ಇರುವ ಚರ್ಮರೋಗವನ್ನು ವಾಸಿಮಾಡಲು ಸಾಧ್ಯವೇ ಇಲ್ಲವಂತೆ. ಈ ಬಗ್ಗೆ ಯಾಮಿ ಫೋಟೋ ಶೇರ್ ಮಾಡುವ ಮೂಲಕ ಬಹಿರಂಗ ಪಡಿಸಿದ್ದಾರೆ.
ಯಾಮಿ ಗೌತಮ್ ಕೆರಟೋಸಿಸ್ ಪಿಲಾರಿಸ್ ಎನ್ನವ ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು ಇದುವರೆಗೂ ಗುಣಪಡಿಸಲು ಸಾಧ್ಯವಾಗಿಲ್ಲವಂತೆ. ಈ ಬಗ್ಗೆ ಭಯ ಮತ್ತು ಅಭದ್ರತೆಗಳನ್ನು ತೊಡೆದು ಹಾಕಲು ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಇದೇನೂ ಗಂಭೀರ ಸಮಸ್ಯೆ ಅಲ್ಲದಿದ್ದರೂ ಕಿರಿಕಿರಿ ಉಂಟುಮಾಡುತ್ತದೆ. ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಚರ್ಮದ ಮೇಲ್ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತವೆ. ಈ ಗುಳ್ಳೆಗಳಿಂದ ಉರಿ, ತುರಿಕೆ, ನೋವು ಏನೂ ಇರುವುದಿಲ್ಲ. ಹದಿಹರೆಯಲ್ಲಿ ಇದ್ದಾಗಲೇ ಯಾಮಿ ಗೌತಮ್ ಅವರಿಗೆ ಈ ಸಮಸ್ಯೆ ಕಾಣಿಸಿಕೊಂಡಿತು. ಅಂದಿನಿಂದ ಇದನ್ನು ಮುಚ್ಚಿಟ್ಟುಕೊಂಡೇ ಬಂದಿದ್ದ ಅವರು ಈಗ ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ.
ಇತ್ತೀಚಿಗೆ ಮಾಡಿಸಿದ ಫೋಟೋಶೋಟ್ ಶೇರ್ ಮಾಡಿ ನಟಿ ಯಾಮಿ ಗೌತಮ್ ಈ ಬಗ್ಗೆ ಹೇಳಿದ್ದಾರೆ. “ಇತ್ತೀಚೆಗೆ ಒಂದು ಫೋಟೋಶೂಟ್ ಮಾಡಲಾಯಿತು. ಸಾಮಾನ್ಯವಾಗಿ ನಮ್ಮ ಚರ್ಮದ ಸಮಸ್ಯೆಯನ್ನು ಮರೆಮಾಚುವ ಸಲುವಾಗಿ ಆ ಫೋಟೋಗಳನ್ನು ಪೋಸ್ಟ್ ಪ್ರೊಡಕ್ಷನ್ ಗೆ ಕಳಿಸುತ್ತೇವೆ. ಆದರೆ ಈ ಬಾರಿ ಬೇರೆ ಆಲೋಚನೆ ಬಂತು. ನಾನೇಕೆ ಈ ಸಮಸ್ಯೆಯನ್ನು ಒಪ್ಪಿಕೊಳ್ಳಬಾರದು ಎನಿಸಿತು” ಎಂದು ಯಾಮಿ ಗೌತಮ್ ಪೋಸ್ಟ್ ಮಾಡಿದ್ದಾರೆ.
“ಸತ್ಯವನ್ನು ನಿಮ್ಮೆದುರು ಒಪ್ಪಿಕೊಳ್ಳಲು ಧೈರ್ಯ ಮಾಡಿದ್ದೇನೆ. ನಾನು ಹದಿಹರೆಯದಲ್ಲಿ ಇರುವಾಗಲೇ ಈ ಸಮಸ್ಯೆ ಇರುವುದು ಗೊತ್ತಾಯಿತು. ಇನ್ನೂ ಇದು ವಾಸಿ ಆಗಿಲ್ಲ. ತುಂಬ ವರ್ಷಗಳಿಂದ ಇದನ್ನು ನಿಭಾಯಿಸುತ್ತಿದ್ದೇನೆ. ಆದರೆ ಇಂದು ನನ್ನ ನ್ಯೂನತೆಯನ್ನು ಒಪ್ಪಿಕೊಂಡು, ಭಯ ಮತ್ತು ಅಭದ್ರತೆಯನ್ನು ತೊಲಗಿಸುವ ಧೈರ್ಯ ಮಾಡಿದ್ದೇನೆ” ಎಂದು ಯಾಮಿ ಗೌತಮ್ ಹೇಳಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ನಟಿ ಯಾಮಿ ಗೌತಮ್ ಕೊನೆಯದಾಗಿ ಭೂತ್ ಪೊಲೀಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಅವರ ಬಳಿ ದಸ್ವಿ, ಎ ಥರ್ಡೇ, ಸೇರಿದಂತೆ ಇನ್ನು ಎರಡು ಸಿನಿಮಾಗಳಿವೆ. ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲೂ ಮಿಂಚಿರುವ ಯಾಮಿ ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಎನ್ನುವುದು ವಿಶೇಷ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಉಲ್ಲಾಸ ಉತ್ಸಾಹ ಸಿನಿಮಾ ಮೂಲಕ ಯಾಮಿ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು.