ವಿಶ್ವ ಕ್ರಿಕೆಟ್ ದಾಖಲೆ ಪುಸ್ತಕದ ಪುಟಗಳನ್ನು ತಿರುವುತ್ತಾ ಹೋದರೆ ಲೆಕ್ಕವಿಲ್ಲದಷ್ಟು ದಾಖಲೆಗಳು ಅಚ್ಚಾಗಿವೆ. ದಾಖಲೆಗಳ ನಿರ್ಮಾಣ ಮತ್ತು ಅವುಗಳನ್ನು ಬ್ರೇಕ್ ಮಾಡುವುದು ಕಾಮನ್. ಪಂದ್ಯದಿಂದ ಪಂದ್ಯಕ್ಕೆ ದಾಖಲೆಗಳು ಸೃಷ್ಟಿ ಆಗುತ್ತಲೇ ಇರುತ್ತವೆ.ಅಂಥಾ ದಾಖಲೆಗಳಲ್ಲಿ ಕೆಲವೊಂದು ಅಜರಾಮರವಾಗಿವೆ. ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಗಳು ಬ್ಯಾಟಿಂಗಲ್ಲಿ ಮಾಡಲಾಗದ್ದನ್ನು ಬೌಲರ್ ಗಳು ಸಾಧಿಸಿದ್ದಾರೆ…ಅಂತೆಯೇ ವಿಶ್ವದ ಅತಿರಥ ಮಹಾರಥ ಬೌಲರ್ ಗಳಿಂದ ಆಗದ ಬೌಲಿಂಗ್ ವಿಭಾಗದ ಸಾಧನೆಯನ್ನು ಬ್ಯಾಟ್ಸ್‌ಮನ್ ಗಳು ಮಾಡಿದ್ದಾರೆ.
ಇಲ್ಲಿ ವಿಶ್ವಕ್ರಿಕೆಟಿನ ಕೆಲವು ವಿಶೇಷ ದಾಖಲೆಗಳಿವೆ.
1) ಒಡಿಐನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿರುವುದು ವೇಗಿ ಅಗರ್ಕರ್..!
ಯುವರಾಜ್ ಸಿಂಗ್ , ವೀರೇಂದ್ರ ಸೆಹ್ವಾಗ್ ರಂಥಾ ಹೊಡಿಬಡಿ ಆಟಗಾರರು ಭಾರತ ತಂಡದಲ್ಲಿದ್ದರು. ಈಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂಥಾ ಸ್ಟಾರ್ ಬ್ಯಾಟ್ಸ್ ಮನ್ ಗಳಿದ್ದಾರೆ. ಆದರೆ ಒಡಿಐನಲ್ಲಿ ಅತಿವೇಗದ ಅರ್ಧಶತಕ ಬಾರಿಸಿರುವ ದಾಖಲೆ ಇರುವುದು ಮಾಜಿ ವೇಗದ ಬೌಲರೊಬ್ಬರ ಹೆಸ್ರಲ್ಲಿ.
ಹೌದು ಮಾಜಿ ವೇಗಿ ಅಜಿತ್ ಅಗರ್ಕರ್ ಈ ಸಾಧನೆ ಮಾಡಿದವರು. 2000ನೇ ಇಸವಿಯಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರು ಅಗರ್ಕರ್. ಆ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಅಜೇಯ 67 ರನ್ ಚಚ್ಚಿದ್ದರು. 21ಬಾಲ್ ಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಅವರ ಅಂದಿನ ಮನಮೋಹಕ ಸ್ಫೋಟಕ ಆಟದಲ್ಲಿ 4 ಸಿಕ್ಸರ್ ಗಳು ಮತ್ತು 7 ಬೌಂಡರಿಗಳಿದ್ದವು. ಅದು ಒಡಿಐನಲ್ಲಿ ಭಾರತದ ಅತಿವೇಗದ ಅರ್ಧಶತಕವಾಗಿದೆ. ಅಗರ್ಕರ್ 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು.
2) ಕನ್ನಡಿಗನ ಅಪರೂಪದ ದಾಖಲೆ :
ಭಾರತದ ಮಾಜಿ ಸ್ಪಿನ್ನರ್ ಕನ್ನಡಿಗ ಬಿ.ಎಸ್ ಚಂದ್ರಶೇಖರ್ ಅಪರೂಪದ ದಾಖಲೆ ಮಾಡಿದ್ದಾರೆ. ಅವರು ರನ್ ಗಳಿಸಿದ್ದಕ್ಕಿಂತ ಹೆಚ್ಚು ವಿಕೆಟ್ ಕಿತ್ತಿದ್ದಾರೆ. 167 ರನ್ ಮಾಡಿರುವ ಅವರು 242 ವಿಕೆಟ್ ಪಡೆದಿದ್ದಾರೆ. ನ್ಯೂಜಿಲೆಂಡ್ ನ ಮಾರ್ಟಿನ್ ಚಂದ್ರಶೇಖರ ಜೊತೆ ಈ ದಾಖಲೆ ಹಂಚಿಕೊಂಡಿದ್ದಾರೆ. ಅವರು ವೃತ್ತಿಬದುಕಲ್ಲಿ ಗಳಿಸಿದ್ದು 123 ರನ್. ಆದರೆ ವಿಕೆಟ್ ಪಡೆದಿದ್ದು 233.
3) ವಾರ್ನ್ ಗಿಂತ ಹೆಚ್ಚು ವಿಕೆಟ್ ಪಡೆದಿರುವ ಜಯಸೂರ್ಯ!
ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಟೆಸ್ಟ್ ಕ್ರಿಕೆಟಲ್ಲಿ 708 ವಿಕೆಟ್ ಕಿತ್ತು ಮಿಂಚಿದ್ದಾರೆ. ಆದರೆ ಒಡಿಐನಲ್ಲಿ ಶ್ರೀಲಂಕಾದ ಸ್ಫೋಟಕ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ವಾರ್ನಿಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಒಡಿಐ ನಲ್ಲಿ ವಾರ್ನ್ 293 ವಿಕೆಟ್ ಕಿತ್ತಿದ್ದರೆ , ಜಯಸೂರ್ಯ 340 ವಿಕೆಟ್ ಪಡೆದಿದ್ದಾರೆ.
4) ಟೆಸ್ಟಲ್ಲಿ ಅತಿವೇಗದ ಶತಕ ಬಾರಿಸಿದ್ದು ಮಿಸ್ಬಾ..!
ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಏಕದಿನ ಕ್ರಿಕೆಟಲ್ಲಿ ಒಂದೇ ಒಂದು ಶತಕ ಬಾರಿಸದೆ ಐದುವರೆ ಸಾವಿರ ರನ್ ಗಳಿಸಿದ್ದಾರೆ. ಟೆಸ್ಟ್ ನಲ್ಲಿ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಇವರೇ ಟೆಸ್ಟಲ್ಲಿ ಅತಿವೇಗದ ಶತಕ ಬಾರಿಸಿದವರು! ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸಲ್ಲಿ 56 ಬಾಲ್ ಗಳಲ್ಲಿ 11ಬೌಂಡರಿ 5 ಸಿಕ್ಸರ್ ಸಹಿತ ಸೆಂಚುರಿ ಸಿಡಿಸಿದ್ದರು.
5) ಬ್ರಾಡ್ಮನ್ ಬಾರಿಸಿದ್ದು ಆರೇ ಆರು ಸಿಕ್ಸರ್..!
ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ವಿಶ್ವಕ್ರಿಕೆಟ್ ಎಂದೂ ಮರೆಯದ ಆಟಗಾರ.52 ಟೆಸ್ಟ್ ಗಳಲ್ಲಿ 6996 ರನ್ ಬಾರಿಸಿರುವ ಬ್ರಾಡ್ಮನ್ ಗರಿಷ್ಠ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಆದರೆ, ಅವರು ವೃತ್ತಿ ಬದುಕಿನಲ್ಲಿ ಬಾರಿಸಿದ್ದು ಆರೇ ಆರು ಸಿಕ್ಸರ್..