ಮಾಗಡಿ ರಸ್ತೆಯಲ್ಲಿನ ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ ದಿನದಿಂದ ದಿನಕ್ಕೆ ತೀವ್ರವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ರಾತ್ರೋರಾತ್ರಿ ವಿಷ್ಣು ಪ್ರತಿಮೆ ಹಾಳಾಗಿದ್ದನ್ನು ಕಂಡ ವಿಷ್ಣು ಅಭಿಮಾನಿಗಳು ಪ್ರತಿಭಟನೆಯನ್ನು ನಡೆಸಿದ್ದರು. ಇದಾಗಿ ಒಂದಷ್ಟು ದಿನ ಕಳೆದ ನಂತರ ಇದೀಗ ಮತ್ತೆ ಕಿಡಿಗೇಡಿಗಳಿಂದ ವಿಷ್ಣು ಪ್ರತಿಮೆ ಪ್ರಕರಣ ತಿರುವು ಪಡೆದುಕೊಳ್ಳುತ್ತಿದೆ.
ಹೌದು ಸಾಮಾಜಿಕ ಜಾಲತಾಣದಲ್ಲಿ ವಿಷ್ಣು ಪ್ರತಿಮೆ ಕುರಿತಂತೆ ರಾಜಣ್ಣ ಅಭಿಮಾನಿಗಳು ಮತ್ತು ಶಿವರಾಜಕುಮಾರ್ ಅವರ ಅಭಿಮಾನಿಗಳನ್ನು ಕೆಲ ಕಿಡಿಗೇಡಿಗಳು ನಿಂದಿಸಿದ್ದಾರೆ. ವಿಷ್ಣು ಪ್ರತಿಮೆ ವಿಚಾರಕ್ಕೆ ರಾಜಣ್ಣ ಮತ್ತು ಶಿವಣ್ಣ ಹೆಸರನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಾಕುವ ಮುಖಾಂತರ ರಾಜವಂಶದ ಹೆಸರನ್ನು ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ರಾಜಣ್ಣ ಮತ್ತು ಶಿವಣ್ಣ ಅವರ ಅಭಿಮಾನಿಗಳು ನಿನ್ನೆ ಪ್ರಸನ್ನ ಚಿತ್ರಮಂದಿರದ ಎದುರು ಕಿಡಿಗೇಡಿಗಳ ವಿರುದ್ಧ ಪ್ರತಿಭಟನೆಯನ್ನು ನಡೆಸಿದರು.
ಅಷ್ಟೇ ಅಲ್ಲದೆ ಮಾಗಡಿ ರಸ್ತೆಯ ಪೊಲೀಸ್ ಠಾಣೆಗೆ ಹೋಗಿ ಕಿಡಿಗೇಡಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಯಾರೋ ಮಾಡಿದ ನೀಚ ಕೃತ್ಯದಿಂದ ಇದೀಗ ಸ್ಟಾರ ನಟರುಗಳ ಅಭಿಮಾನಿಗಳು ಕಿತ್ತಾಡುವಂತಾಗಿದೆ.