ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಕೃಷ್ಣರಾಜ ಸಾಗರ (ಕೆಆರ್‌ಎಸ್) ನೀರಿನ ಮಟ್ಟ 110.10 ಅಡಿಗೆ ತಲುಪಿದೆ. 10,034 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಲಾಶಯಕ್ಕೆ ಭಾನುವಾರ ಸಂಜೆಯ ವೇಳೆಗೆ 37,048 ಕ್ಯುಸೆಕ್ ಒಳಹರಿವು ಇತ್ತು. ಗರಿಷ್ಠ 124.80 ಅಡಿ ಎತ್ತರದ ಜಲಾಶಯದ ನೀರಿನ ಮಟ್ಟ 110 ಅಡಿಗೆ ತಲುಪಿದೆ. ಒಳಹರಿವು ಹೆಚ್ಚಿರುವ ಹಿನ್ನಲೆಯಲ್ಲಿ ಕಾವೇರಿ ನೀರಾವರಿ ನಿಗಮ ಹೊರ ಹರಿವಿನ ಪ್ರಮಾಣವನ್ನು ಸಹ ಹೆಚ್ಚಳ ಮಾಡಿದೆ. 10,034 ಕ್ಯುಸೆಕ್ ಹೊರ ಹರಿವು ಇದ್ದು, ಜಲಾಶಯದ ತಗ್ಗು ಪ್ರದೇಶದಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ.
ಕೆಆರ್‌ಎಸ್ ಜಲಾಶಯದ ನೀರನ್ನು ಕೃಷಿಗೆ ಮಾತ್ರ ಬಳಕೆ ಮಾಡುವುದಿಲ್ಲ. ಬೆಂಗಳೂರು, ಮಂಡ್ಯ ಮತ್ತು ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಸಹ ಬಳಕೆ ಮಾಡಲಾಗುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯದಲ್ಲಿ107 ಅಡಿ ನೀರಿನ ಸಂಗ್ರಹವಿತ್ತು.