ಶಕ್ತಿ ಯೋಜನೆ ಪರಿಷ್ಕರಣೆಯ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಶಕ್ತಿ ಯೋಜನೆ ಪರಿಷ್ಕರಣೆಯ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ನಿನ್ನೆಯ ಕಾರ್ಯಕ್ರದಲ್ಲಿ ನಾನು ಇರಲಿಲ್ಲ. ನಾನು ಮಂತ್ರಿಗಳ ಜೊತೆ ಮಾತಾಡುತ್ತೇನೆ. ಪರಿಷ್ಕರಣೆಯ ಯಾವುದೇ ಉದ್ದೇಶವಿಲ್ಲ. ಆ ರೀತಿ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದರು.
ಇನ್ನೂ ಅಜ್ಜಂಪೀರ್ ಖಾದ್ರಿಯವರನ್ನು ಕಾಂಗ್ರೆಸ್ ಅವರು ಕಿಡ್ನಾಪ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಕುಮಾರಸ್ವಾಮಿ ಸುಳ್ಳು ಹೇಳುವುದನ್ನು ಬಿಟ್ಟು ಇನ್ನೇನು ಮಾಡುವುದಿಲ್ಲ. ಕುಮಾರಸ್ವಾಮಿ, ಬಿಜೆಪಿಯವರು ಬರೀ ಸುಳ್ಳನ್ನೇ ಹೇಳುತ್ತಾರೆ. ಯಾವತ್ತಾದರೂ ಯಾವುದಾದರೂ ವಿಷಯವನ್ನು ಬಿಜೆಪಿ ಅವರು, ಕುಮಾರಸ್ವಾಮಿ ಲಾಜಿಕಲ್ ಎಂಡ್ ತಗೊಂಡು ಹೋಗಿದ್ದಾರಾ? ಬರೀ ಸುಳ್ಳು ಆರೋಪ ಮಾಡುತ್ತಾರೆ ಅಷ್ಟೆ ಎಂದು ಕಿಡಿಕಾರಿದರು.