ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿದ್ದು, ಇದೀಗ ಎನ್‌ಸಿಬಿಯ ವಶದಲ್ಲಿದ್ದಾರೆ. ಇಂದು ಮಧ್ಯಾಹ್ನ ಪ್ರಕರಣದ ಮರು ವಿಚಾರಣೆ ಇದ್ದು, ಆರ್ಯನ್‌ಗೆ ಜಾಮೀನು ಸಿಗುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.
ಆರ್ಯನ್, ಮುಂಬೈ ಸಮುದ್ರ ತೀರಕ್ಕೆ ಹತ್ತಿರದಲ್ಲಿ ಐಶಾರಾಮಿ ಕ್ರೂಸ್ ಶಿಪ್‌ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದರು, ಶನಿವಾರ ರಾತ್ರಿ ಶಿಪ್ ಮೇಲೆ ದಾಳಿ ನಡೆಸಿದ ಪೊಲೀಸರು ಪಾರ್ಟಿಯಲ್ಲಿ ಭಾಗವಹಿಸಿದ್ದ ಸುಮಾರು 8 ಮಂದಿಯನ್ನು ಬಂಧಿಸಿದ್ದರು, ಅದರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಹ ಇದ್ದರು.
ಆರ್ಯನ್ ಖಾನ್, ಮುನ್‌ಮುನ್ ಧಮೇಚಾ ಹಾಗೂ ಅರ್ಬಾಜ್ ಖಾನ್ ಮರ್ಚೆಂಟ್ ಅವರುಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಎಲ್ಲರಿಗೂ ಒಂದು ದಿನ ಎನ್‌ಸಿಬಿ ವಶಕ್ಕೆ ನೀಡಲಾಗಿದೆ. ಆರೋಪಿಗಳನ್ನು ಅಡಿಷನಲ್ ಚೀಫ್ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ಆರ್.ಕೆ.ರಾಜೇಭೋಸ್ಲೆ ಮುಂದೆ ಹಾಜರುಪಡಿಸಿದ ಎನ್‌ಸಿಬಿಯು, ಎಫ್‌ಐಆರ್‌ನಲ್ಲಿ ಕ್ರೂಸ್ ಪಾರ್ಟಿಯಿಂದ ವಶಕ್ಕೆ ಪಡೆದಿರುವ ಡ್ರಗ್ಸ್‌ನ ಪ್ರಮಾಣ ಎಷ್ಟು ಎಂಬುದನ್ನು ನಮೂದು ಮಾಡಿದೆ.
ಶಾರಖ್ ಪುತ್ರ ಭಾಗವಹಿಸಿದ್ದ ಪಾರ್ಟಿಯಲ್ಲಿ 13 ಗ್ರಾಂ ಕೊಕೇನ್, ಐದು ಗ್ರಾಂ ಎಂಡಿ (ಮೆಫೆಡ್ರೋನ್), 21 ಗ್ರಾಂ ಚರಸ್, 22 ಎಂಡಿಎಂಎ (ಎಕ್ಸ್‌ಟಸಿ) ಮಾತ್ರೆಗಳು ದೊರೆತಿವೆ. ಜೊತೆಗೆ 1.33 ಲಕ್ಷ ಹಣವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಸೇವನೆ ಪ್ರಕರಣ ದಾಖಲಿಸಿದ್ದರೆ ಅರ್ಬಾಜ್ ಖಾನ್ ಹಾಗೂ ಮುನ್‌ಮುನ್ ಧಮೇಚಾ ವಿರುದ್ಧ ಡ್ರಗ್ಸ್ ಸಾಗಾಟ, ಮಾರಾಟದ ಪ್ರಕರಣ ದಾಖಲಿಸಲಾಗಿದೆ.