ಶಾಲೆ ಪುನಾರಂಭಕ್ಕೆ ಇದೊಂದೇ ದಾರಿ

0
40

ಮಕ್ಕಳಿಗೆ ಕೊರೊನಾ ಲಸಿಕೆಗಳ ಲಭ್ಯತೆ ಒಂದು ಮೈಲುಗಲ್ಲಾಗಲಿದ್ದು, ಶಾಲೆಗಳ ಪುನರಾರಂಭಕ್ಕೆ ಹಾಗೂ ಮಕ್ಕಳಿಗೆ ಹೊರಾಂಗಣ ಚಟುವಟಿಕೆ ಮುಕ್ತಗೊಳಿಸಲು ದಾರಿ ಮಾಡಿಕೊಡುತ್ತದೆ ಎಂದು ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಭರವಸೆ ವ್ಯಕ್ತಪಡಿಸಿದ್ದಾರೆ.
“ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು 2-18 ವರ್ಷದ ಮಕ್ಕಳ ಮೇಲೆ ಪ್ರಯೋಗಿಸುತ್ತಿದ್ದು, ಮೊದಲ ಹಾಗೂ ಮೂರನೇ ಹಂತದ ಪ್ರಯೋಗದ ಮಾಹಿತಿಯು ಸೆಪ್ಟೆಂಬರ್‌ನಲ್ಲಿ ಲಭ್ಯವಾಗಲಿದೆ. ಔಷಧ ನಿಯಂತ್ರಕದಿಂದ ಅನುಮೋದನೆ ಪಡೆದ ನಂತರ ಅದೇ ತಿಂಗಳಿನಲ್ಲಿ ಮಕ್ಕಳಿಗೆ ಲಸಿಕೆ ದೊರೆಯುವ ನಿರೀಕ್ಷೆಯಿದೆ” ಎಂದು ಅವರು ತಿಳಿಸಿದರು.


ಇದಕ್ಕೂ ಮೊದಲು ಅಮೆರಿಕದ ಫೈಜರ್ ಲಸಿಕೆಗೆ ಅನುಮೋದನೆ ದೊರೆತರೆ, ಆ ಲಸಿಕೆ ಕೂಡ ಮಕ್ಕಳಿಗೆ ಒಂದು ಆಯ್ಕೆಯಾಗಲಿದೆ. ಜೊತೆಗೆ ಝೈಡಸ್ ಲಸಿಕೆ ಲಭ್ಯವಾದರೆ ಮಕ್ಕಳಿಗೆ ಅತಿ ಶೀಘ್ರದಲ್ಲಿಯೇ ಲಸಿಕೆ ನೀಡಲು ಆರಂಭಿಸಲಾಗುವುದು ಎಂದು ಗುಲೇರಿಯಾ ಹೇಳಿದ್ದಾರೆ.
ಔಷಧ ತಯಾರಕ ಝೈಡಸ್ ಕ್ಯಾಡಿಲಾ ಕೂಡ ತನ್ನ “Zycov-D” ಲಸಿಕೆಯನ್ನು ಸಿದ್ಧಪಡಿಸಿದ್ದು, ಶೀಘ್ರವೇ ಔಷಧ ನಿಯಂತ್ರಕ ಮಂಡಳಿಗೆ ಅನುಮೋದನೆಗೆ ಅರ್ಜಿ ಹಾಕುವುದಾಗಿ ತಿಳಿದುಬಂದಿದೆ. ಈ ಲಸಿಕೆಯನ್ನು ವಯಸ್ಕರು ಹಾಗೂ ಮಕ್ಕಳಿಗೂ ನೀಡಬಹುದಾಗಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಕೊರೊನಾ ಕಾರಣವಾಗಿ ಕಳೆದ ಒಂದೂವರೆ ವರ್ಷದಿಂದ ಶಾಲೆಗಳು ತೆರೆಯದೇ ಮಕ್ಕಳ ಶೈಕ್ಷಣಿಕ ಬದುಕು ನಷ್ಟವಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದ ಅವರು, “ಶಾಲೆಗಳು ಪುನರಾರಂಭವಾಗಬೇಕು. ಈ ವಿಷಯದಲ್ಲಿ ಲಸಿಕೆಗಳು ಬಹು ಮುಖ್ಯಪಾತ್ರ ವಹಿಸುತ್ತವೆ” ಎಂದಿದ್ದಾರೆ.
ಮಕ್ಕಳಿಗೆ ಲಸಿಕೆ ನೀಡಿದ ನಂತರ ಶಾಲೆಗಳನ್ನು ಧೈರ್ಯದಿಂದ ಪುನರಾರಂಭ ಮಾಡಬಹುದಾಗಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕು ಮಕ್ಕಳಲ್ಲಿ ಗಂಭೀರ ಪರಿಣಾಮ ಬೀರುವುದಿಲ್ಲ. ಆದರೆ ಸೋಂಕು ಯಾವಾಗ ಬೇಕಾದರೂ ತನ್ನ ಸ್ವರೂಪ ಬದಲಿಸಿಕೊಳ್ಳಬಹುದು. ಹೀಗಾಗಿ ಮುನ್ನೆಚ್ಚರಿಕೆಯಾಗಿ ಮಕ್ಕಳಿಗೆ ಲಸಿಕೆ ನೀಡುವುದು ಅವಶ್ಯಕ ಎಂದು ಸರ್ಕಾರ ಈಚೆಗೆ ತಿಳಿಸಿತ್ತು. ಮಕ್ಕಳ ಮೇಲೆ ಕೊರೊನಾ ಪರಿಣಾಮದ ಕುರಿತು ಅಧ್ಯಯನಕ್ಕೆ ತಜ್ಞರ ತಂಡ ರಚಿಸಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

LEAVE A REPLY

Please enter your comment!
Please enter your name here