ಕೋವಿಡ್‌ನ ಡೆಲ್ಟಾ ಪ್ಲಸ್ ರೂಪಾಂತರಕ್ಕೆ ತಮಿಳುನಾಡಿನಲ್ಲಿ ಮೊದಲ ಬಲಿಯಾಗಿದೆ. ”ಮಧುರೈನ ವ್ಯಕ್ತಿಯೊಬ್ಬರು ಡೆಲ್ಟಾ ಪ್ಲಸ್ ರೂಪಾಂತರ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ,” ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಬ್ರಮಣಿಯನ್, ”ರಾಜ್ಯದಲ್ಲಿ ಹೊಸ ‘ಡೆಲ್ಟಾ ಪ್ಲಸ್’ ರೂಪಾಂತರದ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಇಬ್ಬರು ಚೇತರಿಸಿಕೊಂಡಿದ್ದಾರೆ,” ಎಂದು ತಿಳಿಸಿದ್ದಾರೆ.
”ಚೆನ್ನೈನ 32 ವರ್ಷದ ನರ್ಸ್ ಮತ್ತು ಕಾಂಚೀಪುರಂ ಜಿಲ್ಲೆಯ ಇನ್ನೊಬ್ಬ ವ್ಯಕ್ತಿಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಪಾಸಿಟಿವ್ ಆಗಿದೆ. ಇನ್ನು ಮಧುರೈನಲ್ಲಿ ರೋಗಿಯ ಸಾವಿನ ನಂತರ, ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ‘ಡೆಲ್ಟಾ ಪ್ಲಸ್’ ರೂಪಾಂತರ ಸೋಂಕು ಇರುವುದು ಎಂದು ದೃಢಪಟ್ಟಿದೆ,” ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಈ ರೋಗಿಯ ಸಂಪರ್ಕದಲ್ಲಿದ್ದವರಲ್ಲಿ ಕೊರೊನಾ ನೆಗೆಟಿವ್ ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್‌ನ ಗರಿಷ್ಠ 22 ಪ್ರಕರಣಗಳು ವರದಿಯಾದರೆ, ತಮಿಳುನಾಡಿನಲ್ಲಿ ಶುಕ್ರವಾರದವರೆಗೆ ಒಂಬತ್ತು ಜನರಲ್ಲಿ ಈ ಸೋಂಕು ಕಂಡು ಬಂದಿದೆ.
ಈ ನಡುವೆ, ”ಶುಕ್ರವಾರ ಡೆಲ್ಟಾ ಪ್ಲಸ್ ರೂಪಾಂತರಕ್ಕೆ ಮಹಾರಾಷ್ಟ್ರದಲ್ಲಿ ಮೊದಲ ಬಲಿಯಾಗಿದೆ. ರತ್ನಾಗಿರಿ ಸಿವಿಲ್ ಆಸ್ಪತ್ರೆಯಲ್ಲಿ ವೃದ್ಧ ಮಹಿಳೆ ಸಾವನ್ನಪ್ಪಿದ್ದಾರೆ,” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ 22 ಪ್ರಕರಣಗಳು ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ ಒಂಬತ್ತು, ಮಧ್ಯಪ್ರದೇಶದಲ್ಲಿ ಏಳು, ಕೇರಳದಲ್ಲಿ ಮೂರು, ಪಂಜಾಬ್ ಮತ್ತು ಗುಜರಾತ್‌ನಲ್ಲಿ ತಲಾ ಎರಡು ಪ್ರಕರಣಗಳು ಮತ್ತು ಆಂಧ್ರಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಹರಿಯಾಣ ಮತ್ತು ಕರ್ನಾಟಕದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ