ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆಡಿದ ಮಾತಿಗೆ, ಬಿಜೆಪಿ ನಾಯಕರು ಮುಗಿಬಿದ್ದದ್ದು ಗೊತ್ತೇ ಇದೆ. ಬಿಜೆಪಿ ನಾಯಕರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರುವ ಕುಮಾರಸ್ವಾಮಿ ಈಗ ಸಿ.ಟಿ.ರವಿ ಟ್ವೀಟಿಗೂ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.
“ಮಾಜಿ ಪ್ರಧಾನಿ ಶ್ರೀಯುತ ದೇವೇಗೌಡ ಅವರು ಆರ್‌ಎಸ್‌ಎಸ್ ಸಿದ್ದಾಂತಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಅವರ ಪುತ್ರರಾದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾತ್ರ ಸಂಘದ ಸಿದ್ದಾಂತಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಅಪ್ರಬುದ್ಧತೆಗೆ ಸಾಕ್ಷಿ” ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದರು.
ಇದಕ್ಕೆ ಉತ್ತರ ನೀಡಿರುವ ಕುಮಾರಸ್ವಾಮಿ, “2006ಕ್ಕಿಂತ ಮೊದಲು ರಾಜ್ಯದಲ್ಲಿದ್ದ ಬಿಜೆಪಿ ನಾಯಕರ ಚರಿತ್ರೆ ಗಮನಿಸಿ. ಜನರ ಬಾಯಿಯಲ್ಲಿ ಅವರ ಹಗರಣಗಳ ಕಥೆಗಳಿವೆ. RSSನಿಂದ ಅವರೆಲ್ಲ ತರಬೇತಿ ಪಡೆದು ರಾಷ್ಟ್ರ ನಿರ್ಮಾಣ ಮಾಡಿದರೋ, ಜನರ ಹಣ ಲೂಟಿ ಹೊಡೆದು ತಮ್ಮ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿಕೊಂಡರೋ ಎನ್ನುವುದನ್ನು ತಿಳಿದುಕೊಳ್ಳಿ” ಎಂದು ತಿರುಗೇಟು ನೀಡಿದ್ದಾರೆ.
ಹದಿನಾರು ಸರಣಿ ಟ್ವೀಟ್ ಅನ್ನು ಮಾಡಿರುವ ಕುಮಾರಸ್ವಾಮಿಯವರು, ಸಂಘದ ಮೇಲಿನ ನಿಷ್ಠೆ ನಿಮ್ಮನ್ನು ರಕ್ಷಣೆ ಮಾಡಿಲ್ಲ, ನಿಮ್ಮನ್ನು ರಕ್ಷಣೆ ಮಾಡಿದ್ದು ನಾನು, ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಿ ಎಂದು ಎಚ್ಡಿಕೆ ಹೇಳಿದ್ದಾರೆ.