ಸಂವಿಧಾನ ಬರದೇ ಇದ್ದರೆ ನಾವು, ನೀವು ಶಿಕ್ಷಣ ಪಡೆಯಲು ಸಾಧ್ಯವಿರಲಿಲ್ಲ: ಸಿಎಂ ಸಿದ್ದರಾಮಯ್ಯ
ತುಮಕೂರು: ಸಂವಿಧಾನ ಬರದೇ ಇದ್ದರೆ ನಾವು, ನೀವು ಶಿಕ್ಷಣ ಪಡೆಯಲು ಸಾಧ್ಯವಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕುರುಬ ಸಮಾಜದ ಸಾಂಸ್ಕೃತಿಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಕುರುಬ ಸಮುದಾಯದ ಸಂಸ್ಕೃತಿ ದರ್ಶನ ಮಾಲೆಯ 31 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಮ್ಮ ಜ್ಞಾನ ತಿಳಿವಳಿಕೆಯಲ್ಲಿ ಸ್ಪಷ್ಟತೆ ಇರಬೇಕು. ಕರ್ಮ ಸಿದ್ಧಾಂತವನ್ನು ದಿಕ್ಕರಿಸುವ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು. ಆಗ ಮಾತ್ರ ಗುಲಾಮಗಿರಿಯಿಂದ ಹೊರಗೆ ಬರಬಹುದು. ಸತ್ಯ ಹೇಳುವ ಚಾತಿ ಬೆಳೆಸಿಕೊಳ್ಳಬಹುದು ಎಂದರು.
ಕಾಳಿದಾಸನ ನಾಲಗೆ ಮೇಲೆ ಬ್ರಹ್ಮ ಅಕ್ಷರ ಬರೆದದ್ದಕ್ಕೆ ಮಹಾ ಸಾಹಿತಿಯಾದ ಎನ್ನುವ ಮಾತನ್ನೆಲ್ಲಾ ನಂಬಬೇಡಿ. ವಾಲ್ಮೀಕಿ ದರೋಡೆಕೋರ ಆಗಿದ್ದ ಅನ್ನುವುದನ್ನೆಲ್ಲಾ ನಂಬಬೇಡಿ. ಶೂದ್ರರು ವಿದ್ಯಾವಂತರಾಗಿ ಏನಾದರೂ ಮಹತ್ವವಾದದ್ದನ್ನು ಬರೆದರೆ ಅವರ ಬಗ್ಗೆ ಇಂಥಾ ಕತೆಗಳನ್ನು ಕಟ್ಟಿ ಬಿಡ್ತಾರೆ ಹುಷಾರು ಎಂದು ಎಚ್ಚರಿಸಿದರು.
ಬಸವಣ್ಣ 850 ವರ್ಷಗಳ ಹಿಂದೆಯೇ ಅನುಭವ ಮಂಟಪ ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ಪ್ರಗತಿಪರ ವಿಚಾರಗಳನ್ನು ಇಟ್ಟುಕೊಂಡವರಿಗೆ ನಿರಂತರವಾಗಿ ಸಮಸ್ಯೆ ಬರುತ್ತಲೇ ಇರುತ್ತವೆ. ಹೀಗಾಗಿ ಪ್ರಗತಿಪರ ವಿಚಾರಗಳ ಜೊತೆ ನೀವು ಸದಾ ಗಟ್ಟಿಯಾಗಿ ನಿಲ್ಲಬೇಕು. ಪ್ರಗತಿಪರ ವಿಚಾರಗಳ ಜೊತೆಗೆ ನಾವು ನಿಲ್ಲದೆ ಸಮ ಸಮಾಜ ಬರಬೇಕು ಎಂದರೆ ಸಾಧ್ಯವಿಲ್ಲ ಎಂದು ವಿವರಿಸಿದರು.