ಸಚಿನ್ ತೆಂಡೂಲ್ಕರ್ ವಿಶ್ವಕ್ರಿಕೆಟ್ ಅನ್ನು ಆಳಿದ ಮಹಾನ್ ಕ್ರಿಕೆಟಿಗ..! ವಿಶ್ವಕ್ರಿಕೆಟಲ್ಲಿ ಸಚಿನ್ ಮಾಡಿದ ಸಾಧನೆ ಅವರನ್ನು ಕ್ರಿಕೆಟ್ ದೇವರು ಎಂದು ಕರೆಯುವಂತೆ ಮಾಡಿದೆ. ಸಚಿನ್ ಕ್ರಿಕೆಟಲ್ಲಿ ಮಾಡಿದ ಸಾಧನೆ ಒಂದೆರಡಲ್ಲ. ದಾಖಲೆ ಪುಸ್ತಕಗಳನ್ನು ತೆರೆದು ನೋಡಿದ್ರೆ ಸಚಿನ್ ಹೆಸರೇ ಎಲ್ಲೆಡೆ ರಾರಾಜಿಸುತ್ತದೆ. ಅತೀ ಹೆಚ್ಚು ಶತಕ, ಅತೀ ಹೆಚ್ಚು ರನ್ ಸೇರಿದಂತೆ ಸಚಿನ್ ಬರೆದಿರುವ ದಾಖಲೆಗಳು ಲೆಕ್ಕಕ್ಕಿಲ್ಲ. ಇಂಥಾ ಸಚಿನ್ ಗೆ ಸಮನಾಗಿ ಸಮಕಾಲಿನ ಬ್ಯಾಟಿಂಗ್ ಸ್ಟಾರ್, ಹಿಟ್ ಮನ್ ರೋಹಿತ್ ಶರ್ಮಾ ನಿಲ್ಲಬಲ್ಲವರಾಗಿದ್ದಾರೆ. ಅವರ ದಾಖಲೆಗಳನ್ನು ಪುಡಿಗಟ್ಟುವ ಸಾಧ್ಯತೆಇದೆ…ಇದನ್ನು ಅಂಕಿ-ಅಂಶಿಗಳೇ ಸಾರುತ್ತವೆ.
* 1989 ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಐದಾರು ವರ್ಷಗಳ ಬಳಿಕ ಅಂದರೆ 1994ರಲ್ಲಿ ತಮ್ಮ 20ನೇ ವಯಸ್ಸಲ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಅಲ್ಲಿಂದ ಭಾರತ ತಂಡದ ಖಾಯಂ ಆರಂಭಿಕ ಆಟಗಾರನಾಗಿ ಮಿಂಚಿದರು. ಸಚಿನ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸುವ ತೀರ್ಮಾನ ತೆಗೆದುಕೊಂಡವರು ಅಂದಿನ ನಾಯಕ ಮೊಹಮ್ಮದ್ ಅಜರುದ್ದೀನ್. ಅವರ ನಿರ್ದಾರಕ್ಕೆ ಬದ್ಧರಾಗಿ ಸಚಿನ್ ಆರಂಭಿಕರಾಗಿ ಯಶಸ್ವಿಯಾದರು. ನ್ಯೂಜಿಲೆಂಡ್ ವಿರುದ್ಧ ಆಂಕ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ 49 ಬಾಲ್ ಗಳಲ್ಲಿ 15 ಬೌಂಡರಿ ಸೇರಿದಂತೆ 82 ರನ್ ಬಾರಿಸಿದ್ದರು. ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ್ಲ. ಸಚಿನ್ ಇದಕ್ಕು ಮುನ್ನ 66 ಇನ್ನಿಂಗ್ಸ್ ಗಳಲ್ಲಿ ಒಂದೇ ಒಂದು ಸೆಂಚುರಿ ಬಾರಿಸಿರಲಿಲ್ಲ.
ಅಂತೆಯೇ ಸಚಿನ್ ರೀತಿಯೇ ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿದ್ದವರಲ್ಲ. ಅವರು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2013ರಿಂದ ಆರಂಭಿಕರಾಗಿ ಖಾಯಂ ಸ್ಥಾನ ಪಡೆದರು. 2007 ರಿಂದ 13 ರ ಅವಧಿಯಲ್ಲಿ ಅವರು ಖಾಯಂ ಆಗಿ ಆರಂಭಿಕರಾಗಿ ಇರಲಿಲ್ಲ. ಬಳಿಕ ಅವರು ಟೀಮ್ ಇಂಡಿಯಾದ ಗೆಲುವಿನ ರುವಾರಿಯಾಗಿರುವುದು ಎಲ್ಲರಿಗೂ ಗೊತ್ತಿದೆ.
1989 -1994 ರ ಅವಧಿಯಲ್ಲಿ ಸಚಿನ್ 66 ಇನ್ನಿಂಗ್ಸ್ ಗಳಲ್ಲಿ 30.84 ಸರಾಸರಿಯಲ್ಲಿ , 74.4 ಸ್ಟ್ರೇಕ್ ರೇಟ್ ನಲ್ಲಿ 1758 ರನ್ ಗಳಿಸಿದ್ದರು. ಅದ್ರಲ್ಲಿ 13 ಬಾರಿ 50ಕ್ಕೂ ಹೆಚ್ಚು ರನ್ ಮಾಡಿದ್ದರು. ಅಂತೆಯೇ ರೋಹಿತ್ ಶರ್ಮಾ 2007 ರಿಂದ 2013 ರ ಅವಧಿಯಲ್ಲಿ 81 ಇನ್ನಿಂಗ್ಸ್ ಗಳಲ್ಲಿ 30.43 ಸರಾಸರಿಯಲ್ಲಿ 77.9 ಸ್ಟ್ರೇಕ್ ರೇಟಲ್ಲಿ 1978 ರನ್ ಗಳಿಸಿದ್ದರು. 14 ಸಲ 50ಕ್ಕೂ ಹೆಚ್ಚು ರನ್ ಬಾರಿಸಿದ್ದರು. ( ಈ ಅಂಕಿ ಅಂಶಗಳಲ್ಲಿ ರೋಹಿತ್ ಮೂರು ಬಾರಿ ಓಪನರ್ ಆಗಿ ಕಣಕ್ಕಿಳಿದು 29 ರನ್ ಗಳಿಸಿರುವುದು ಸೇರಿದೆ)
* ಸಚಿನ್ ಏಕದಿನ ಕ್ರಿಕೆಟಲ್ಲಿ ಆರಂಭಿಕ ಆಟಗಾರರಾಗಿ 48.29 ರ ಸರಾಸರಿ, 88.05 ರ ಸ್ಟ್ರೈಕ್ ರೇಟಲ್ಲಿ 15,310 ರನ್ ಮಾಡಿದ್ದಾರೆ. 45 ಶತಕ ಕೂಡ ಗಳಿಸಿದ್ದಾರೆ. ರೋಹಿತ್ ಶರ್ಮಾ ಬರೋಬ್ಬರಿ 58.11 ರ ಸರಾಸರಿಯಲ್ಲಿ 7148 ರನ್ ಬಾರಿಸಿದ್ದಾರೆ. ಸ್ಟ್ರೇಕ್ ರೇಟಲ್ಲೂ ಸಚಿನ್ ಮೀರಿಸಿರುವ ರೋಹಿತ್ 92.26 ರ ಸ್ಟ್ರೇಕ್ ರೇಟ್ ಹೊಂದಿದ್ದಾರೆ.
* ಸಚಿನ್ ಓಪನರ್ ಆಗಿ 7.6 ಇನ್ನಿಂಗ್ಸೊಂದಕ್ಕೆ ಶತಕ ಬಾರಿಸಿದ್ದರೆ, ರೋಹಿತ್ ಶರ್ಮಾ 5.1 ಇನ್ನಿಂಗ್ಸೊಂದಕ್ಕೆ ಶತಕ ಬಾರಿಸಿದ್ದಾರೆ.
* ಸಚಿನ್ ವಿಶ್ವ ಏಕದಿನ ಕ್ರಿಕೆಟಲ್ಲಿ ಮೊದಲ ಡಬಲ್ ಸೆಂಚುರಿ ಬಾರಿಸಿದ ಖ್ಯಾತಿ ಹೊಂದಿದ್ದಾರೆ. ಆದರೆ, ರೋಹಿತ್ ಶರ್ಮಾ ಮೂರು ಡಬಲ್ ಸೆಂಚುರಿ ಬಾರಿಸಿ ದಾಖಲೆ ಬರೆದಿದ್ದಾರೆ.
ಹೀಗೆ ರೋಹಿತ್ ಶರ್ಮಾ ಅಂಕಿ- ಅಂಶಗಳ ಲೆಕ್ಕಾಚಾರದಲ್ಲಿ ಸದ್ಯ ಸಚಿನ್ ಮೀರಿಸುವಂತಿದ್ದರೂ ಸಚಿನ್ ಆಡಿದ ಕಾಲಕ್ಕೂ ಈಗ ರೋಹಿತ್ ಯುಗಕ್ಕೂ ತುಂಬಾ ವ್ಯತ್ಯಾಸವಿದೆ. ಈಗ ಬ್ಯಾಟಿಂಗ್ ಸ್ನೇಹಿ ಪಿಚ್ ಗಳಿವೆ..ಹೆಚ್ಚು ಮ್ಯಾಚ್ ಗಳಿವೆ. ಸಚಿನ್ 18 ವರ್ಷಗಳ ಸುದೀರ್ಘ ಕಾಲ ಆರಂಭಿಕರಾಗಿ ಮಹತ್ತರ ಪಾತ್ರವಹಿಸಿದ್ದರು. ಆ ನಿಟ್ಟಿನಲ್ಲಿ ನೋಡಿದರೆ ರೋಹಿತ್ ಮತ್ತಷ್ಟು ದೂರ ಕ್ರಮಿಸಬೇಕಿದೆ.