ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಂಡನೆಯಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ 2021 (ಮತಾಂತರ ನಿಷೇಧ ಮಸೂದೆ) ಬಗ್ಗೆ ನಾಳೆ (ಡಿ.23ರಂದು) ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಳೆ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಮಸೂದೆಯ ಬಗ್ಗೆ ಚರ್ಚೆ ನಡೆಸಿ, ಅಂಗೀಕಾರ ಪ್ರಕ್ರಿಯೆಗಳನ್ನು ಮುಗಿಸುವ ಕುರಿತು ಸದನದ ಗಮನಕ್ಕೆ ತಂದರು.
ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಕ್ಷೇಪಿಸಿ, ನಾವು ಮಸೂದೆಯನ್ನು ವಿರೋಧಿಸುತ್ತೇವೆ, ಅಂಗೀಕಾರವಿಲ್ಲ. ಮಸೂದೆ ಚರ್ಚೆಯಾಗಲಿ, ನಮ್ಮ ಪ್ರಶ್ನೆಗಳಿಗೆ ಸರಕಾರ ಉತ್ತರ ಕೊಡಲಿ ಎಂದು ಹೇಳಿದರು.
ಸದ್ಯದ ತೀರ್ಮಾನದಂತೆ ಡಿ. 24ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಗಿಯಲಿದೆ. ಅದಕ್ಕೂ ಮೊದಲು ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ 2021 ಮಸೂದೆಯನ್ನು ಅಂಗೀಕರಿಸಿ, ವಿಧಾನ ಪರಿಷತ್ ಗೆ ಕಳುಹಿಸಬೇಕಾಗಿದೆ. ಅಲ್ಲಿ ಅಂಗೀಕಾರಗೊಂಡು ರಾಜ್ಯಪಾಲರ ಅಂಕಿತ ಬಿದ್ದರೆ ಮಾತ್ರ, ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬರಲಿದೆ. ಹಾಗಾಗಿ ಸರಕಾರಕ್ಕೆ ಅಧಿವೇಶನ ಮುಕ್ತಾಯಕ್ಕೂ ಮೊದಲು ಎರಡೂ ಸದನಗಳಲ್ಲಿ ಈ ಮಸೂದೆಗೆ ಅಂಗೀಕಾರ ಪಡೆಯುವ ಅನಿವಾರ್ಯತೆ ಇದೆ.