ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ
ಧಾರವಾಡ: ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಪಡೆಯಬೇಕೆಂಬ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್‌ನ ವಿಭಾಗೀಯ ಪೀಠದಿಂದ ಮತ್ತೆ ಹಿನ್ನಡೆ ಉಂಟಾಗಿದೆ.
ಈ ಸಂಬಂಧ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ದ್ವಿಸದಸ್ಯ ಪೀಠ ಇಂದು ವಜಾಗೊಳಿಸಿದೆ. ಇದರೊಂದಿಗೆ, ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆ ಮುಂದುವರಿಯಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯಲ್ಲಿ, ಸರ್ಕಾರಿ ಜಾಗಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಸರ್ಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ ಸೇರಿದಂತೆ ಹಲವರು ಹೈಕೋರ್ಟ್‌ನ ಏಕಸದಸ್ಯ ಪೀಠವನ್ನು ಸಂಪರ್ಕಿಸಿದ್ದರು.
ಆ ವೇಳೆ ಏಕಸದಸ್ಯ ಪೀಠ ಸರ್ಕಾರದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿತ್ತು. ಇದನ್ನೇ ಪ್ರಶ್ನಿಸಿ ಸರ್ಕಾರ ಧಾರವಾಡ ಹೈಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಮಂಗಳವಾರ ವಾದ–ಪ್ರತಿವಾದಗಳು ಪೂರ್ಣಗೊಂಡ ಬಳಿಕ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಇಂದು ಪೀಠ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿ, ಏಕಸದಸ್ಯ ಪೀಠದ ತಡೆಯಾಜ್ಞೆ ಮುಂದುವರಿಯಲಿದೆ ಎಂದು ತೀರ್ಪು ನೀಡಿದೆ.
ಅದರ ಪರಿಣಾಮ, ಏಕಸದಸ್ಯ ಪೀಠದಲ್ಲಿ ವಿಚಾರಣೆ ಇತ್ಯರ್ಥವಾಗುವವರೆಗೆ ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕೆಂಬ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ಮುಂದುವರಿಯಲಿದೆ.






