ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿ ಅಧಿಕಾರಕ್ಕೆ ಬರಲಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ರಚನೆಗಾಗಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಹನ ಚರ್ಚೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ.
ನರೇಂದ್ರ ಮೋದಿ ನಾಳೆ ಸಂಜೆ ಎರಡನೆ ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರ ಆಯ್ಕೆಗಾಗಿಯೂ ಮಹತ್ವದ ಮಾತುಕತೆ ನಡೆದಿದೆ. ನಿನ್ನೆ ಮೋದಿ ಮತ್ತು ಶಾ ಸುಮಾರು ಐದು ತಾಸುಗಳಿಗೂ ಹೆಚ್ಚು ಕಾಲ ನೂತನ ಮಂತ್ರಿಮಂಡಲ ರಚನೆಯ ಮಂತ್ರಾಲೋಚನೆಯಲ್ಲಿ ತೊಡಗಿದರು.
ಹದಿನೇಳನೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವಿಗೆ ಕಾರಣಕರ್ತರಾದ ಅಮಿತ್ ಅವರು ಈ ಕೇಂದ್ರ ಸಚಿವರಾಗುವುದು ಬಹುತೇಕ ಖಚಿತವಾಗಿದ್ದು, ನಾಳೆ ಮೋದಿ ಜೊತೆ ಪ್ರಮಾಣವಚನ ಸ್ವೀಕರಿಸುವವರಲ್ಲಿ ಮೊದಲಿಗರಾಗಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಮೋದಿ, ಅಮಿತ್ ಶಾ ಸೇರಿದಂತೆ 65 ಸಚಿವರ ಮಂತ್ರಿಮಂಡಲ ರಚನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ನಾಳೆ ಮೋದಿ ಅವರೊಂದಿಗೆ ಹಿರಿಯ ಮುಖಂಡರಾದ ರಾಜನಾತ್ ಸಿಂಗ್, ನಿತಿನ್ ಗಡ್ಕರಿ, ರವಿ ಶಂಕರ್‍ಪ್ರಸಾದ್, ಪಿಯೂಷ್ ಗೋಯೆಲ್, ಪ್ರಕಾಶ್ ಜಾವ್ಡೇಕರ್, ನಿರ್ಮಲಾ ಸೀತಾರಾಮನ್ ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಅಗ್ರಮಾನ್ಯರು ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.
ಎಲ್ಲ ರಾಜ್ಯಗಳಿಗೂ ಆದ್ಯತೆ ನೀಡಿ ಮೋದಿ ಮತ್ತು ಶಾ ಪಟ್ಟಿಯೊಂದನ್ನು ಸಿದ್ದಪಡಿಸಿದ್ದು, ಕರ್ನಾಟಕದಿಂದ ಹಿರಿಯ ಮುಖಂಡರಾದ ಡಿ.ವಿ.ಸದಾನಂದಗೌಡ, ವಿ. ಶ್ರೀನಿವಾಸಪ್ರಸಾದ್ ಮತ್ತು ಸುರೇಶ್ ಅಂಗಡಿ ಅವರಿಗೆ ಮಂತ್ರಿಗಿಗಿ ಲಭಿಸಲಿದೆ ಎಂದು ಮೂಲಗಳು ಹೇಳಿವೆ.
ಎನ್‍ಡಿಎ ಪ್ರಮುಖ ಮಿತ್ರಪಕ್ಷಗಳನ್ನು ಓಲೈಸಲು ಮೋದಿ ಮತ್ತು ಶಾ ಚಾಣಾಕ್ಷತೆಯಿಂದ ಹೊಸ ಸಂಪುಟ ರಚನೆಗೆ ಮುಂದಾಗಿದ್ದಾರೆ. ಬಿಜೆಪಿ ಪ್ರಮುಖ ಮಿತ್ರಪಕ್ಷವಾದ ಶಿವಶೇನೆ ಮತ್ತು ಜೆಡಿಯುಗೆ ತಲಾ ಎರಡು ಸ್ಥಾನಗಳು (ಒಂದು ಸಂಪುಟ ಸ್ಥಾನಮಾನ ಮತ್ತು ಮತ್ತೊಂದು ಸಹಾಯಕ ಸಚಿವರ ಹುದ್ದೆ) ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಅದೇ ರೀತಿ ರಾಮ್‍ವಿಲಾಸ್ ಪಾಸ್ವಾನ್ ನೇತೃತ್ವದ ಎನ್‍ಜೆಪಿ ಮತ್ತು ಶಿರೋಮಣಿ ಅಕಾಲಿ ದಳಕ್ಕೆ ತಲಾ ಒಂದೊಂದು ಸಚಿವ ಸ್ಥಾನ ಲಭಿಸಲಿದೆ ಎಂದು ಹೇಳಲಾಗುತ್ತಿದೆ. ಎನ್‍ಡಿಎ ಮಿತ್ರಪಕ್ಷವಾದ ತಮಿಳುನಾಡಿನ ಎಐಎಡಿಂಎಕೆಯಿಂದ ಒಬ್ಬರು ಮಂತ್ರಿಯಾಗಲಿದ್ಧಾರೆ.
ಯಾರಿಗೂ ಅಸಮಾಧಾನವಾಗದ ರೀತಿಯಲ್ಲಿ ಮೋದಿ ಮತ್ತು ಶಾ ಅತ್ಯಂತ ಜಾಣ್ಮೆಯಿಂದ ಹೆಜ್ಜೆ ಇಟ್ಟಿದ್ದಾರೆ. ಸಚಿವ ಸ್ಥಾನ ವಂಚಿತ ಹಿರಿಯ ಮುಖಂಡರು ಮತ್ತು ಮಿತ್ರ ಪಕ್ಷಗಳ ಇತರ ಧುರೀಣರಿಗೆ ಕೇಂದ್ರದ ವಿವಿಧ ನಿಗಮ-ಮಂಡಳಿಗಳ ಅತ್ಯುನ್ನತ ಹುದ್ದೆಗಳಿಗೆ ನೇಮಕ ಮಾಡುವ ಸಾಧ್ಯತೆ ಇದೆ.