ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್
ದೇವನಹಳ್ಳಿ: ಹಿರಿಯೂರು ಬಸ್ ದುರಂತದ ಬಳಿಕ ಸಾರಿಗೆ ಇಲಾಖೆ ಬಸ್‌ಗಳಲ್ಲಿ ಗೂಡ್ಸ್ ಸಾಗಣೆ ಮಾಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರೂ, ಕೆಲ ಬಸ್ ಸಿಬ್ಬಂದಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಬೆಳಕಿಗೆ ಬಂದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದ ಬಸ್‌ವೊಂದರಲ್ಲಿ ಅಪಾರ ಪ್ರಮಾಣದ ಲಗೇಜ್ ಸಾಗಿಸುತ್ತಿದ್ದುದನ್ನು ಆರ್‌ಟಿಓ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಂಭವಿಸಿದ ಸರಣಿ ಬಸ್ ದುರಂತಗಳ ಹಿನ್ನೆಲೆ, ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗುವ ಯಾವುದೇ ಗೂಡ್ಸ್ ಸಾಗಣೆ ಮಾಡದಂತೆ ಸಾರಿಗೆ ಇಲಾಖೆ ಸೂಚನೆ ನೀಡಿತ್ತು. ಆದರೆ ಈ ಎಲ್ಲಾ ಎಚ್ಚರಿಕೆಗಳನ್ನು ಲೆಕ್ಕಿಸದೆ ಬಸ್‌ವೊಂದು ಟಾಪ್ ಹಾಗೂ ಡಿಕ್ಕಿಯಲ್ಲಿ ಬಟ್ಟೆ ಮೂಟೆಗಳು, ಪೈಂಟ್ ಬಾಕ್ಸ್‌ಗಳನ್ನು ತುಂಬಿಕೊಂಡು ಬಂದಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಕಾರ್ಯಾಚರಣೆ ನಡೆಸಿದ ಆರ್‌ಟಿಓ ಸುದೀಂದ್ರ ಹಾಗೂ ತಂಡ ಬಸ್‌ನ್ನು ತಡೆದು ಪರಿಶೀಲನೆ ನಡೆಸಿದಾಗ, ಮೇಲ್ನೋಟಕ್ಕಿಂತ ಹೆಚ್ಚಿನ ಪ್ರಮಾಣದ ಲಗೇಜ್ ಡಿಕ್ಕಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಸ್‌ನ್ನು ಸೀಜ್ ಮಾಡಲಾಗಿದ್ದು, ಬಸ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ಲೀಪರ್ ಕೋಚ್ ಬಸ್‌ಗಳಿಗೆ ಟಾಪ್ ಇರಬಾರದು ಎಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಿರುವುದು ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ, ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಮತ್ತೊಂದು ಬಸ್‌ನಲ್ಲಿ ಹೂ ಸಾಗಣೆ ಮಾಡುತ್ತಿದ್ದುದನ್ನು ಪತ್ತೆಹಚ್ಚಿ ಅದನ್ನೂ ಸೀಜ್ ಮಾಡಲಾಗಿದೆ. ಜೊತೆಗೆ ಓವರ್ ಲಗೇಜ್ ಸಾಗಣೆ ಮಾಡುತ್ತಿದ್ದ 15ಕ್ಕೂ ಹೆಚ್ಚು ಬಸ್‌ಗಳಿಗೆ ಆರ್‌ಟಿಓ ಅಧಿಕಾರಿಗಳು ದಂಡ ವಿಧಿಸಿದ್ದಾರೆ.






