ಸಾಲುಮರದ ತಿಮ್ಮಕ್ಕ, ಎಸ್.ಎಲ್.ಭೈರಪ್ಪ ಸಹಿತ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‌ನಲ್ಲಿ ಸಂತಾಪ
ಬೆಳಗಾವಿ: ವಿಧಾನಸಭೆಯ ಚಳಿಗಾಲದ ಅಧಿವೇಶನ ಸುವರ್ಣಸೌಧದಲ್ಲಿ ಇಂದಿನಿಂದ ಆರಂಭವಾಗಿದ್ದು, ಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಸಂತಾಪ ಸೂಚಿಸಲಾಯಿತು. ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಕೆ. ನರಹರಿ, ವಿಧಾನ ಪರಿಷತ್ತಿನ ಹಾಗೂ ವಿಧಾನ ಸಭೆಯ ಮಾಜಿ ಸದಸ್ಯರಾಗಿದ್ದ ಆರ್.ವಿ. ದೇವರಾಜ್,
ಲೋಕಸಭಾ ಮಾಜಿ ಸದಸ್ಯರು, ಮಾಜಿ ಸಚಿವರು ಹಾಗೂ ವಿಧಾನ ಸಭೆ ಹಾಲಿ ಸದಸ್ಯರಾಗಿದ್ದ ಹುಲ್ಲಪ್ಪ ಯಮನಪ್ಪ ಮೇಟಿ, ಖ್ಯಾತ ಜಾನಪದ ತಜ್ಞ ಹಾಗೂ ಸಾಹಿತಿಯಾಗಿದ್ದ ಡಾ: ಎನ್.ಆರ್. ನಾಯಕ, ಖ್ಯಾತ ಕಾದಂಬರಿಕಾರರಾಗಿದ್ದ ಎಸ್.ಎಲ್. ಭೈರಪ್ಪ, ಹಿರಿಯ ಪತ್ರಕರ್ತರಾಗಿದ್ದ ಟಿ.ಜೆ.ಎಸ್. ಜಾರ್ಜ್, ಪ್ರಸಿದ್ಧ ಸುಗಮ ಸಂಗೀತ ಗಾಯಕಿಯಾಗಿದ್ದ ಅನುರಾಧಾ ಧಾರೇಶ್ವರ, ಪರಿಸರ ಸಂರಕ್ಷಣೆಯಲ್ಲಿಯೇ ತನ್ನ ಜೀವನ ಸವೆಸಿದ ಸಾಲುಮರದ ತಿಮ್ಮಕ್ಕ,
ಮಾಜಿ ಸಂಸದರು, ಖ್ಯಾತ ನಟ ಹಾಗೂ ನಿರ್ಮಾಪಕರಾಗಿದ್ದ ಧರ್ಮೇಂದ್ರ ಹಾಗೂ ಹಿರಿಯ ಹಾಸ್ಯ ನಟರಾಗಿದ್ದ ಮೈಸೂರು ಶ್ರೀಕಂಠಯ್ಯ ಉಮೇಶ್ ಅವರುಗಳು ನಿಧನಕ್ಕೆ ವಿಷಾಧ ವ್ಯಕ್ತಪಡಿಸಿ ಸಂತಾಪ ಸೂಚಿಸಲಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚನೆ ನಿರ್ಣಯ ಮಂದಿಸಿದರು. ಸಭಾ ನಾಯಕರು ಹಾಗೂ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಬೋಸರಾಜು ಹಾಗೂ ವಿರೋಧ ಪಕ್ಷ ದ ನಾಯಕರು ಮೃತರ ಕುರಿತು ಮಾತನಾಡಿದರು. ಮೃತರ ಗೌರವಾರ್ಥ ಒಂದು ನಿಮಿಷ ಮೌನ ಆಚರಣೆ ಮಾಡಲಾಯಿತು.






