ಸಾಲ ತೀರಿಸಲು, ಆಸ್ಪತ್ರೆ ಖರ್ಚು ಭರಿಸಲು ಒಂದೇ ಗ್ರಾಮದಲ್ಲಿ ಹಲವು ಮಂದಿ ತಮ್ಮ ಕಿಡ್ನಿ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊರೋನಾ ಸಾಂಕ್ರಾಮಿಕದಿಂದ ಹಲವರ ಬಡತನದ ಸಂಕಷ್ಟ ತೀವ್ರಗೊಂಡಿದೆ. ಈ ನಡುವೆ ಬಡತನದ ಸಂಕಷ್ಟ ಎದುರಿಸಲು, ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಲು, ಚಿಕಿತ್ಸೆ ವೆಚ್ಚಗಳನ್ನು ಭರಿಸಲು ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ದಕ್ಷಿಣ ಧರಂತುಲ್ ಗ್ರಾಮದ ಹಲವು ಮಂದಿ ತಮ್ಮ ಕಿಡ್ನಿಗಳನ್ನು ಮಾರಾಟ ಮಾಡಿಕೊಂಡಿದ್ದಾರೆ.
ಕಿಡ್ನಿ ಮಾರಾಟ ಜಾಲದಲ್ಲಿದ್ದ ಓರ್ವ ಮಹಿಳೆ ಸೇರಿ ಒಟ್ಟು ಇಬ್ಬರನ್ನು ಬಂಧಿಸಲಾಗಿದೆ. ಮಹಿಳೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಎಸ್ ಪಿ ಅಪರ್ಣ ನಟರಾಜನ್ ಮಾಹಿತಿ ನೀಡಿದ್ದಾರೆ.
ಗುವಾಹಟಿ ಮೂಲದ ಏಜೆಂಟ್ ಲಿಲಿಮಾಯ್ ಬೋಡೋ ಕಿಡ್ನಿ ಮಾರಾಟ ಮಾಡಲು ಸಿದ್ಧವಿರುವವರನ್ನು ಹುಡುಕಿ ಗ್ರಾಮಕ್ಕೆ ಬಂದಿದ್ದಾಗ ಆಕೆಯನ್ನು ಬಂಧಿಸಲಾಗಿದೆ.
ಆಕೆ ಭರವಸೆ ನೀಡಿದ್ದರ ಪ್ರಕಾರ ಹಣವನ್ನು ಪಡೆಯದೇ ಅಸಮಾಧಾನಕ್ಕೆ ಒಳಗಾಗಿದ್ದ ಕುಟುಂಬವೊಂದು ಆಕೆಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದೆ.
ಕಿಡ್ನಿಯೊಂದಕ್ಕೆ 4-5 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡುತ್ತಿದ್ದ ಆಕೆ ಕಮಿಷನ್ ಲೆಕ್ಕದಲ್ಲಿ 1.5 ಲಕ್ಷ ಪಡೆಯುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.