ಸಿಇಟಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ಜನರ ನಂಬಿಕೆ ಮೇಲಿನ ದಾಳಿ: ಪ್ರಲ್ಹಾದ್ ಜೋಶಿ
ಧಾರವಾಡ: ಶಿವಮೊಗ್ಗ ಮತ್ತು ಬೀದರ್ನಲ್ಲಿ ಸಿಇಟಿ ಅಭ್ಯರ್ಥಿಗಳನ್ನು ಪರೀಕ್ಷೆ ಬರೆಯಲು ಕೊಠಡಿಗೆ ಕಳುಹಿಸುವಾಗ ತಪಾಸಣೆ ಮಾಡಿದ್ದ ಅಧಿಕಾರಿಗಳು ಜನಿವಾರ ಹಾಕಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲು ನಿರಾಕರಿಸಿದ್ದರು. ಹಲವು ವಿದ್ಯಾರ್ಥಿಗಳ ಜನಿವಾರ ಮತ್ತು ಕೈಯಲ್ಲಿದ್ದ ಕಾಶಿ ದಾರವನ್ನು ಬಿಚ್ಚಿಸಿದ್ದರು.
ಇದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ” ಕರ್ನಾಟಕದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ವಿಷಯ ನನಗೆ ತಿಳಿಯಿತು. ಇದು ಜನರ ನಂಬಿಕೆಯ ಮೇಲಿನ ದಾಳಿ. ಕರ್ನಾಟಕದಲ್ಲಿ ಹುಸಿ ಜಾತ್ಯತೀತ ಸರ್ಕಾರದ ಮನೋಭಾವವನ್ನು ನೀವು ನೋಡಬಹುದು.
ಅವರು ಕೆಲವು ವಿದ್ಯಾರ್ಥಿಗಳಿಂದ ಜನಿವಾರ ತೆಗೆಯುವಂತೆ ಮಾಡಿದ್ದಾರೆ. ಒಂದು ಕೇಂದ್ರದಲ್ಲಿ ಜನಿವಾರ ತೆಗೆಯಲು ಸೂಚಿಸಿದ್ದರೆ ಇನ್ನೊಂದು ಸ್ಥಳದಲ್ಲಿ ಜನಿವಾರವನ್ನು ಕತ್ತರಿಸಲಾಗಿದೆ. ಇದು ತುಂಬಾ ಖಂಡನೀಯ. ಸಂಬಂಧಪಟ್ಟ ಪ್ರಾಧಿಕಾರ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದೆ ಮತ್ತು ಕ್ಷಮೆ ಯಾಚಿಸಿದೆ. ಆದರೆ ಪರೀಕ್ಷೆ ಬರೆಯಲು ಅವಕಾಶ ಸಿಗದ ವ್ಯಕ್ತಿಗೆ ಪರಿಹಾರವೇನು?” ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.