ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊರೊನಾ ವೈರಸ್ ಸೋಂಕಿಗೆ ಗುರಿಯಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಎಂ ಬಿಎಸ್‌ವೈ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಬೆಳಗಾವಿ ಲೋಕಸಭೆ ಉಪ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದ ಸಿಎಂ ಬಿಎಸ್‌ವೈ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡ ಪರಿಣಾಮ ಬಿಎಸ್‌ವೈ ಮತ್ತೆ ಪ್ರಚಾರದಲ್ಲಿ ನಿರತರಾಗಿದ್ದರು. ರಾಜಧಾನಿ ಬೆಂಗಳೂರಿಗೆ ವಾಪಸ್ಸಾದ ಮೇಲೆ ಇಂದು(ಏ.16-ಶುಕ್ರವಾರ) ರಾಮಯ್ಯ ಮೆಮೊರಿಯಲ್ ಆಸ್ಪತ್ರೆಗೆ ದಾಖಲಾದ ಸಿಎಂ ಬಿಎಸ್‌ವೈ, ಕೊರೊನಾ ಪರೀಕ್ಷೆಗೆ ಗುರಿಯಾದಾಗ ಪಾಸಿಟಿವ್ ಫಲಿತಾಂಶ ಬಂದಿದೆ. ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬಿಎಸ್‌ವೈ ಅವರಿಗೆ ಕೊರೊನಾ ದೃಢಪಟ್ಟಿದ್ದರೂ ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದ್ದು, ಮುಖ್ಯಮಂತ್ರಿಗಳು ಶೀಘ್ರ ಗುಣಮುಖರಾಗಲಿ ಎಂದು ಹಲವರು ಹಾರೈಸಿದ್ದಾರೆ. ಚುನಾವಣಾ ಪ್ರಚಾರ, ನಿರಂತರ ಸಭೆ, ಸಮಾರಂಭಗಳಲ್ಲಿ ಭಾಗಿಯಾಗಿದ್ದ ಬಿಎಸ್ ಯಡಿಯೂರಪ್ಪ ಮೊದಲಿಗೆ ಜ್ವರ ಹಾಗೂ ನಂತರ ಕೊರೊನಾ ವೈರಸ್ ಸೋಂಕು ತಗುಲಿದೆ. ಹಾಗಾದರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಎರಡು ದಿನಗಳ ಕಾರ್ಯ ಚಟುವಟಿಕೆಗಳ ಮೇಲೆ ಗಮನಹರಿಸುವುದಾದರೆ..
ಬೆಳಗಾವಿ ಲೋಕಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ತಂಗಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಇದೇ ವೇಳೆ ಸಿಎಂ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು.
ಚುನಾವಣಾ ಪ್ರಚಾರದ ವೇಳೆ ಅನಾರೋಗ್ಯಕ್ಕೆ ತುತ್ತಾದ ಸಿಎಂ ಬಿಎಸ್‌ವೈ ಅವರನ್ನು ಸ್ಥಳೀಯ ವೈದ್ಯರು ತಪಾಸಣೆ ನಡೆಸಿದ್ದರು. ಅಲ್ಲದೇ ಬಿಎಸ್‌ವೈ ತಂಗಿದ್ದ ಹೋಟೆಲ್‌ನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿತ್ತು. ಈ ವೇಳೆ ಸಿಎಂ ಅವರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ನೆಗೆಟಿವ್ ಫಲಿತಾಂಶ ಬಂದಿತ್ತು.
ಕೇವಲ ಬೆಳಗಾವಿ ಮಾತ್ರವಲ್ಲದೇ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರದಲ್ಲೂ ಸಿಎಂ ಬ್ಯುಸಿಯಾಗಿದ್ದರು.
ಇನ್ನು ಉಪ ಚುನಾವಣೆ ಪ್ರಚಾರದ ಬಳಿಕ ರಾಜಧಾನಿ ಬೆಂಗಳೂರಿಗೆ ಮರಳಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ಅಲೆ ತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲು ತುರ್ತು ಸಭೆ ನಡೆಸಿದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ, ಏಳು ಜಿಲ್ಲೆಗಳಲ್ಲಿ ಹೇರಲಾಗಿರುವ ನೈಟ್ ಕರ್ಫ್ಯೂ ಆದೇಶವನ್ನು ಮುಂದುವರೆಸುವ ನಿರ್ಧಾರ ಕೈಗೊಳ್ಳಲಾಯಿತು. ಅಲ್ಲದೇ ರಾಜ್ಯದಲ್ಲಿ ಲಾಕ್‌ಡೌನ್ ಹೇರದಿರುವ ನಿರ್ಣಯ ಮಾಡಲಾಯಿತು.
ಇದಾದ ಬಳಿಕ ಮುಖ್ಯಮಂತ್ರಿಗಳ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿದ್ದರಿಂದ, ಅವರನ್ನು ರಾಮಯ್ಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಇನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢವಾಗುತ್ತಿದ್ದಂತೇ, ಪ್ರತಿಪಕ್ಷ ಕಾಂಗ್ರೆಸ್ ಅವರ ನಡೆಯನ್ನು ಬೇಜವಾಬ್ದಾರಿ ಎಂದು ಟೀಕಿಸಿದೆ. ಜ್ವರವಿದ್ದರೂ ಸಿಎಂ ಬಿಎಸ್‌ವೈ ಉಪಚುನಾವಣೆ ಪ್ರಚಾರದಲ್ಲಿ ಸಿಎಂ ಭಾಗಿಯಾಗಿದ್ದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಅಲ್ಲದೇ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದು 35 ದಿನ ಕಳೆದರೂ ಬಿಎಸ್‌ವೈ ಎರಡನೇ ಡೋಸ್ ಪಡೆದಿಲ್ಲ ಎಂ ಬ ಆರೋಪ ಕೂಡ ಕೇಳಿ ಬಂದಿದೆ. ಮಾರ್ಚ್ 12 ಕ್ಕೆ ಸಿಎಂ ಯಡಿಯೂರಪ್ಪ ಕೋವಿಡ್ ಲಸಿಕೆಯ ಮೊದಲನೇ ಡೋಸ್ ಪಡೆದುಕೊಂಡಿದ್ದರು. ನಿಯಮದಂತೆ ಮೊದಲ ಡೋಸ್ ಪಡೆದ ಬಳಿಕ ಎರಡನೇ ಡೋಸ್ 28 ದಿನಗಳ ನಂತರ ಪಡೆದುಕೊಳ್ಳಬೇಕು.
ಒಟ್ಟಿನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊರೊನಾ ಸೋಂಕಿಗೆ ಗುರಿಯಾಗಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ರಾಜ್ಯದ ಜನತೆ ಹಾರೈಸಿದ್ದಾರೆ.