ಬೆಂಗಳೂರು, ಜೂನ್ 16: ”ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾಪವಿರುವುದು ಸತ್ಯ” ಎಂದು ಸಚಿವ ಕೆ.ಎಸ್. ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.
ನಮ್ಮಲ್ಲಿ ಗೊಂದಲ ಇನ್ನೂ ಇದೆ, ಅದನ್ನು ಸರಿಪಡಿಸಲು ಅರುಣ್ ಸಿಂಗ್ ರಾಜ್ಯಕ್ಕೆ ಬರುತ್ತಿದ್ದಾರೆ, ಅರುಣ್ ಸಿಂಗ್ ಬಂದ ಬಳಿಕ ಏನು ಬೇಕಾದರೂ ಆಗಬಹುದು, ರಾಷ್ಟ್ರೀಯ ನಾಯಕರು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
”ನಾಯಕತ್ವ ಬದಲಾವಣೆಯಾಗುತ್ತಾ, ಏನಾಗುತ್ತೆ ನನಗೆ ತಿಳಿದಿಲ್ಲ, ಇವತ್ತಿನ ಸಭೆಯಲ್ಲಿ ಯಡಿಯೂರಪ್ಪ ಇರುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ, ನಾಳೆ ಎಲ್ಲರ ವೈಯಕ್ತಿಕ ಅಭಿಪ್ರಾಯಕ್ಕೆ ಅವಕಾಶವಿದೆ, ಬಿಜೆಪಿಯಲ್ಲಿ ಗೊಂದಲವಿದೆ ನಾನು ಒಪ್ಪುತ್ತೇನೆ” ಎಂದರು.
17 ಮಂದಿ ಕಾಂಗ್ರೆಸ್, ಜೆಡಿಎಸ್‌ನಿಂದ ಬಂದವರಿಂದ ಸರ್ಕಾರ ಬಂದಿದೆ, ಅವರ ಪರಿಶ್ರಮದಿಂದ ಸರ್ಕಾರವಿದೆ, ಅವರಿಂದ ಗೊಂದಲ ಆಗಿದೆ ಎಂದು ನಾನು ಹೇಳಲ್ಲ, ರಾಜ್ಯದ ಜನ ಬಹುಮತ ಕೊಡಲಿಲ್ಲ.
ಕೆಲವರು ಮುಖ್ಯಮಂತ್ರಿ ಬದಲಾವಣೆ ಬೇಕು ಎಂದು ಹೇಳಿದ್ದಾರೆ, ಕೆಲವರು ದೆಹಲಿಗೆ ಹೋಗಿ ಬಂದಿದ್ದಾರೆ, ನಾನು ಬಹಿರಂಗ ಹೇಳಿಕೆ ಕೊಡಬೇಡಿ ಎಂದು ಹೇಳಿದ್ದೆ, ನಾಲ್ಕು ಗೋಡೆ ಮಧ್ಯೆ ಚರ್ಚೆಯಾಗಬೇಕು ಎಂದು ಕೂಡ ಹೇಳಿದ್ದೆ ಆದರೆ ಅದು ಬಿಟ್ಟು ಹೊರಗಡೆ ಚರ್ಚೆಯಾಗುತ್ತಿದೆ ಎಂದರು.