ಮಂಗಳೂರು ನಗರದ ಹೊರವಲಯದ ತಲಪಾಡಿಯಲ್ಲಿ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತೆಗೆ ಹಾಗೂ ಉಚ್ಚಿಲದಲ್ಲಿ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಸಿಸಿಬಿ ಹಾಗೂ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಠಾಣಾ ಇನ್ ಸ್ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿ ರಾಝಿಕ್ (22) ನನ್ನು ಬಂಧಿಸಿದ್ದಾರೆ.
ನಿನ್ನೆ ಬೆಳಗ್ಗೆ 14ರ ವರ್ಷದ ವಿದ್ಯಾರ್ಥಿನಿ ತನ್ನ ತಂಗಿಯೊಂದಿಗೆ ತಲಪಾಡಿ ಅಲಂಕಾರ ಗುಡ್ಡೆಯಿಂದ ಕಾಲ್ನಡಿಗೆಯ ಮೂಲಕ ತಲಪಾಡಿ ಚೆಕ್ ಪೋಸ್ಟ್ ರಸ್ತೆಯಾಗಿ ಶಾಲೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕನೋರ್ವ ಆಕೆಯ ಕೈ ಎಳೆದು ಲೈಂಗಿಕ ಕಿರುಕುಳ ನೀಡಿದ್ದ.
ಅದೇ ದಿನ ಬೆಳಗ್ಗೆ ಉಚ್ಚಿಲದಲ್ಲಿ ಕಾಲೇಜಿಗೆ ಹೋಗುತ್ತಿದ್ದ 19 ವರ್ಷದ ಯುವತಿಯೊಬ್ಬಳಿಗೆ ಯುವಕನ ಕಿರುಕುಳ ನೀಡಿದ್ದ ಬಗ್ಗೆ ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಳು. ಎರಡೂ ದೂರಿನ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.