ಸಿಖ್ ಸಂಪ್ರದಾಯದಂತೆ ನೆರವೇರಿದ ಡಾ.ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರ
ನವದೆಹಲಿ: ದೇಶದ ಮಾಜಿ ಪ್ರಧಾನಿ, ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರ ದೆಹಲಿಯ ನಿಗಮ ಬೋಧ್ ಘಾಟ್‌ನಲ್ಲಿ ಸಿಖ್ ಸಂಪ್ರದಾಯದಂತೆ ನೆರವೇರಿತು. ಅಂತ್ಯಸಂಸ್ಕಾರದ ವೇಳೆ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.
ಅಂತ್ಯಕ್ರಿಯೆಗೂ ಮುನ್ನ ಡಾ. ಸಿಂಗ್ ಅವರಿಗೆ ಮೂರು ಸೇನಾ ಪಡೆಗಳು ಗೌರವ ಸಮರ್ಪಣೆ ಮಾಡಿದವು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವನ್ನಿರಿಸಿ ಗೌರವ ನಮನ ಸಲ್ಲಿಸಿದರು.
ಬಳಿಕ ಸಿಂಗ್ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ನಡುವೆ ‘ಮನಮೋಹನ್ ಸಿಂಗ್ ಅಮರ್ ರಹೇ.. ಅಮರ್ ರಹೇ’ ಎಂದು ಘೋಷಣೆ ಕೂಗಲಾಯಿತು. ನಂತರ ಸಿಖ್ ಸಂಪ್ರದಾಯದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನಡೆಯಿತು.