ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ, ಗುಡ್ ಲಕ್: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: “ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ. ಐ ವಿಶ್ ಹಿಮ್ ಆಲ್ ದ ಬೆಸ್ಟ್. ಗುಡ್ ಲಕ್” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸದಾಶಿವನಗರ ನಿವಾಸ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದ ಬಳಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೂರ್ಣಾವಧಿಗೆ ನಾನೇ ಸಿಎಂ ಆಗಿ ಮುಂದುವರಿಯುವ ವಿಶ್ವಾಸವಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.
ಈ ಹೇಳಿಕೆಯಿಂದ ಮತ್ತೆ ಗೊಂದಲ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗೆ, “ನೀವುಗಳು (ಮಾಧ್ಯಮಗಳು) ಗೊಂದಲ ಮಾಡಿಕೊಳ್ಳುತ್ತಿದ್ದೀರಿ. ನಮಲ್ಲಿ ಯಾರಿಗೂ ಯಾವುದೇ ಗೊಂದಲವಿಲ್ಲ” ಎಂದು ಸ್ಪಷ್ಟಪಡಿಸಿದರು. ಸಿಎಂ ದಾಖಲೆ ನಿರ್ಮಿಸುತ್ತಿರುವ ಬಗ್ಗೆ ಕೇಳಿದಾಗ, “ಅವರಿಗೆ ಯಶಸ್ಸಾಗಲಿ, ಒಳ್ಳೆಯದಾಗಲಿ. ಅವರಿಗೆ ಉತ್ತಮ ಆರೋಗ್ಯ ದೊರೆಯಲಿ. ಜನರ ಸೇವೆ ಮಾಡುವ ಅವಕಾಶವನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.






