‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ಮೊದಲ ಬಾರಿಗೆ ವೀಕೆಂಡ್ ಎಪಿಸೋಡ್‌ಗಳ ಚಿತ್ರೀಕರಣಕ್ಕೆ ಕಿಚ್ಚ ಸುದೀಪ್ ಹಾಜರ್ ಆಗಲಿಲ್ಲ. ಅನಾರೋಗ್ಯದ ಕಾರಣದಿಂದ ‘ಬಿಗ್ ಬಾಸ್ ಕನ್ನಡ 8’ ವಾರಾಂತ್ಯದ ಸಂಚಿಕೆಗಳಿಗೆ ಸುದೀಪ್ ಗೈರಾದರು. ಕಿಚ್ಚ ಸುದೀಪ್ ಇಲ್ಲದೆ ‘ಬಿಗ್ ಬಾಸ್’ ವಾರಾಂತ್ಯದ ಸಂಚಿಕೆ ಹೇಗಿರಬಹುದು ಎಂಬ ಕುತೂಹಲಕ್ಕೆ ಈಗಾಗಲೇ ತೆರೆಬಿದ್ದಿದೆ. ಕಿಚ್ಚ ಸುದೀಪ್ ಜಾಗಕ್ಕೆ ಬೇರೆ ಯಾರನ್ನೂ ಕರೆತರದ ‘ಬಿಗ್ ಬಾಸ್’ ರಿಯಾಲಿಟಿ ಭಾಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಎಲಿಮಿನೇಷನ್ ಪ್ರಕ್ರಿಯೆಯನ್ನೂ ‘ಬಿಗ್ ಬಾಸ್’ ವಿಶೇಷವಾಗಿ ನಡೆಸಿಕೊಟ್ಟರು.
ಹಾಸ್ಟೆಲ್ ಟಾಸ್ಕ್ ಸುದೀರ್ಘವಾಗಿ ನಡೆದಿದ್ದು ಹಾಗೂ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯ ಚಿತ್ರೀಕರಣ ತಡವಾಗಿದ್ದನ್ನು ಗಮನಿಸಿದ ಸ್ಪರ್ಧಿಗಳು ಬಹುಶಃ ಸುದೀಪ್ ಲೇಟಾಗಿ ಬರಬಹುದು ಎಂದು ಭಾವಿಸಿದ್ದರು. ಆದರೆ, ”ಸುದೀಪ್ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದಿನ ಸಂಚಿಕೆಯಲ್ಲಿ ಹಾಜರಾಗುವುದಿಲ್ಲ” ಎಂದು ಸ್ಪರ್ಧಿಗಳಿಗೆ ‘ಬಿಗ್ ಬಾಸ್’ ತಿಳಿಸಿದರು. ಬಳಿಕ ಸುದೀಪ್‌ಗೆ ಸ್ಪರ್ಧಿಗಳು ಪತ್ರಗಳನ್ನು ಬರೆದರು. ರುಚಿಯಾದ ಅಡುಗೆ ಮಾಡಿ ಸುದೀಪ್‌ಗೆ ಕಳುಹಿಸಿಕೊಟ್ಟರು.
ಪ್ರತಿ ವಾರಾಂತ್ಯದಲ್ಲಿ ಎಲಿಮಿನೇಷನ್ ಪ್ರಕ್ರಿಯೆಯನ್ನು ಸುದೀಪ್ ನಡೆಸಿಕೊಡುತ್ತಿದ್ದರು. ಆದರೆ ಈ ವಾರ ಸುದೀಪ್ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆಯಿತು.
ಕಳೆದ ಸೀಸನ್‌ಗಳಲ್ಲಿ ವಾರದ ಮಧ್ಯೆ ಎಲಿಮಿನೇಷನ್ (ಮಿಡ್‌ವೀಕ್ ಎವಿಕ್ಷನ್) ಪ್ರಕ್ರಿಯೆಯನ್ನು ನಡೆಸಿದ ಹಾಗೆ ಈ ಬಾರಿ ಕೊಂಚ ಸುದೀರ್ಘವಾಗಿ ಎಲಿಮಿನೇಷನ್ ಪ್ರಕ್ರಿಯೆಯನ್ನು ‘ಬಿಗ್ ಬಾಸ್’ ನಡೆಸಿದರು. ಈ ವಾರ ನಾಮಿನೇಟ್ ಆಗಿದ್ದ ಎಂಟು ಸ್ಪರ್ಧಿಗಳ ಪೈಕಿ ಒಬ್ಬೊಬ್ಬರನ್ನು ಸೇಫ್ ಮಾಡಲು ಒಂದೊಂದು ವಿಶೇಷ ಹಾದಿಯನ್ನು ‘ಬಿಗ್ ಬಾಸ್’ ಆಯ್ದುಕೊಂಡಿದ್ದರು.
ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಏಳು ಹಂತಗಳಲ್ಲಿ ನಡೆಯಿತು. ಮೊದಲನೇ ಹಂತದಲ್ಲಿ ಸ್ಪರ್ಧಿಗಳು ಬಾಕ್ಸ್ ಒಳಗೆ ಕೈಹಾಕಬೇಕಿತ್ತು. ಆಗ ಯಾರ ಕೈ ಹಸಿರಾಗುತ್ತದೋ, ಅವರು ಸೇಫ್ ಆದಂತೆ. ಈ ಹಂತದಲ್ಲಿ ಕೈ ಹಸಿರಾದ ಪರಿಣಾಮ ದಿವ್ಯಾ ಉರುಡುಗ ಸೇಫ್ ಆದರು.
ಎರಡನೇ ಹಂತದಲ್ಲಿ ಅಳುವ ಮಗುವಿನ ಗೊಂಬೆಯನ್ನು ‘ಬಿಗ್ ಬಾಸ್’ ಕಳುಹಿಸಿದ್ದರು. ನಾಮಿನೇಟ್ ಆಗಿದ್ದ ಸ್ಪರ್ಧಿಗಳ ಪೈಕಿ ಯಾರ ಕೈಗೆ ಬಂದಾಗ ಗೊಂಬೆ ಅಳು ನಿಲ್ಲಿಸಿ, ನಗಲು ಪ್ರಾರಂಭಿಸುತ್ತದೋ.. ಆ ಸ್ಪರ್ಧಿ ಸೇಫ್ ಆಗುತ್ತಿದ್ದರು. ಆ ಹಂತದಲ್ಲಿ ಸೇಫ್ ಆದವರು ಅರವಿಂದ್.ಕೆ.ಪಿ.
ಮೂರನೇ ಹಂತದಲ್ಲಿ ಬಲೂನ್ ಒಡೆದಾಗ ಹಸಿರು ಪೇಪರ್ ಸಿಕ್ಕ ಕಾರಣ ಮಂಜು ಪಾವಗಡ ಸೇಫ್ ಆದರು. ನಾಲ್ಕನೇ ಹಂತದಲ್ಲಿ ಗನ್ ಟ್ರಿಗರ್ ಒತ್ತಿದಾಗ ಫೈಯರ್ ಆಗದ ಕಾರಣ ದಿವ್ಯಾ ಸುರೇಶ್ ಸೇಫ್ ಆದರು. ಐದನೇ ಹಂತದಲ್ಲಿ ತೆಂಗಿನಕಾಯಿ ಒಡೆದಾಗ ರಾಜೀವ್ ಹೆಸರು ಸಿಕ್ಕಿದ್ರಿಂದ ಅವರು ಸೇಫ್ ಆದರು. ಆರನೇ ಹಂತದಲ್ಲಿ ಮನೆಯವರ ಪತ್ರ ಪಡೆದ ಶಮಂತ್ ಎಲಿಮಿನೇಷನ್‌ನಿಂದ ಬಚಾವ್ ಆದರು.
ಏಳನೇ ಹಂತದಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ವಿಶ್ವನಾಥ್‌ರವರ ಜರ್ನಿ ವಿಡಿಯೋ ಪ್ಲೇ ಆಯ್ತು. ಪರಿಣಾಮ, ವಿಶ್ವನಾಥ್‌ರವರ ಏಳು ವಾರಗಳ ಜರ್ನಿ ಮುಕ್ತಾಯವಾಯಿತು. ಒಟ್ನಲ್ಲಿ, ಸುದೀಪ್ ಅನುಪಸ್ಥಿತಿಯಲ್ಲಿ ಸಂಚಿಕೆಗಳನ್ನು ‘ಬಿಗ್ ಬಾಸ್’ ತಂಡ ಸೃಜನಾತ್ಮಕವಾಗಿ ನಡೆಸಿಕೊಟ್ಟಿದೆ.