ಸೆಪ್ಟೆಂಬರ್ 10ರವರೆಗೂ ಈ ಜಿಲ್ಲೆಗಳಲ್ಲಿ ಭಾರೀ ಮಳೆ

0
32

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 10ರ ವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ತಿಳಿದುಬಂದಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟಕ ಸೇರಿ ಇನ್ನೂ ಹಲವು ರಾಜ್ಯಗಳಲ್ಲಿ ಇನ್ನೂ 3-4 ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಗುಜರಾತ್​ ರಾಜ್ಯಗಳಲ್ಲಿಯೂ ಅತ್ಯಧಿಕ ಮಳೆಯಾಗಲಿದೆ. ಮಧ್ಯ ಭಾರತದ ರಾಜ್ಯಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಮುಂಗಾರು ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್​​ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಮೂಲಕ ಹಾದು ಹೋಗುತ್ತದೆ ಹೀಗಾಗಿ ಮುಂದಿನ ಮೂರ್ನಾಲ್ಕು ದಿನ ಈ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಯಾದಗಿರಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಅಬ್ಬರಕ್ಕೆಜಿಲ್ಲೆಯ ಜನರು ಈಗ ಕಂಗಲಾಗಿದ್ದಾರೆ‌. ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ವಡಗೇರಾ, ಗುರುಮಠಕಲ್ ಮೊದಲಾದ ಕಡೆ ಭಾರೀ ಮಳೆ ಸುರಿದಿದೆ. 80ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಜನರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಕೆರೆ ಹಿನ್ನೀರು ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಪರಿಣಾಮ, ಮನೆಯಲ್ಲಿದ್ದ ಆಹಾರ ಧಾನ್ಯ, ಅಗತ್ಯ ವಸ್ತುಗಳು ಹಾನಿಯಾಗಿವೆ.

ನಾಯ್ಕಲ್ ಗ್ರಾಮದ ನಿವಾಸಿಗಳು ಈಗ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಕೆರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದ ಹಿನ್ನೆಲೆ ಕೊಳವೆ ಬಾವಿಗಳು ನೀರಿನಲ್ಲಿ ಮುಳುಗಿದ ಪರಿಣಾಮ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಈ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆಗೆ ನೀರು ನುಗ್ಗಿದ್ದ ಹಿನ್ನೆಲೆ ನಿರಾಶ್ರಿತರು ಈಗ ಕಾಳಜಿ ಕೇಂದ್ರದಲ್ಲಿ ವಾಸ ಮಾಡುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಹಲವಡೆ ವರುಣ ತನ್ನ ಆರ್ಭಟ ತೋರಿದ್ದಾನೆ. ಬೆಂಗಳೂರಿನಲ್ಲಿ ಇನ್ನೂ 3 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇಂದೂ ಸಹ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 

ಇಂದು ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ. ಕಾರವಾರ, ಅಂಕೋಲಾ, ಗೋಕರ್ಣ, ಕುಮಟಾ, ಚಿಂಚೋಳಿ, ಹೊನ್ನಾವರ, ಕದ್ರ, ಕಲಬುರಗಿ, ಸೇಡಂನಲ್ಲಿ ಮಳೆಯಾಗಿದೆ. ಶಿರಾಲಿ, ಬೀದರ್, ಕೆಂಭಾವಿ, ಕಮಲಾಪುರ, ಯಲ್ಲಾಪುರ, ಜೇವರಗಿ, ಗಂಗಾಪುರ, ಮಂಡಗೋಡ್, ಕಿರವತ್ತಿ, ಮಂಗಳೂರು, ಉಡುಪಿ, ಸಿದ್ದಾಪುರ, ಲಕ್ಷ್ಮೇಶ್ವರ, ಭೀಮರಾಯನಗುಡಿ, ಪುತ್ತೂರು, ಮಾಣಿ, ಸವನೂರು, ಸಾಗರ, ನಾಪೊಕ್ಲು, ಭಾಗಮಂಡಲದಲ್ಲಿ ಮಳೆಯಾಗಿದೆ.

LEAVE A REPLY

Please enter your comment!
Please enter your name here