ಸೆಪ್ಟೆಂಬರ್ 2ರವರೆಗೂ ಈ ರಾಜ್ಯಗಳಲ್ಲಿ ಮಳೆ ಎಚ್ಚರಿಕೆ

1
70

ದೇಶದಲ್ಲಿ ಮುಂಗಾರು ಮುಂದುವರೆದಿದ್ದು, ಸೆಪ್ಟೆಂಬರ್ 2ರವರೆಗೂ ಹಲವು ರಾಜ್ಯಗಳಲ್ಲಿ ಅಧಿಕ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ದೇಶದ ಮಧ್ಯ ಭಾಗ ಹಾಗೂ ಪಶ್ಚಿಮ ಭಾಗದ ರಾಜ್ಯಗಳಲ್ಲಿ ಈ ಅವಧಿಯಲ್ಲಿ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.

ಒಡಿಶಾ, ಛತ್ತೀಸ್‌ಗಡ, ಬಿಹಾರ, ವಿದರ್ಭಾದಲ್ಲಿ ಸೋಮವಾರ ಅಧಿಕ ಮಳೆಯಾಗಲಿದೆ. ಮಧ್ಯಪ್ರದೇಶದಲ್ಲಿ ಆಗಸ್ಟ್‌ 31ರವರೆಗೂ ಮಳೆಯಾಗಲಿದ್ದು, ಪಶ್ಚಿಮ ಮಧ್ಯಪ್ರದೇಶ, ಗುಜರಾತ್‌ನಲ್ಲಿ ಕೂಡ ಆಗಸ್ಟ್‌ 31ರವರೆಗೂ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಸೌರಾಷ್ಟ್ರ ಹಾಗೂ ಕಚ್‌ನಲ್ಲಿ ಸೆಪ್ಟೆಂಬರ್ 1ರವರೆಗೆ, ಗೋವಾ ಹಾಗೂ ಕೊಂಕಣದಲ್ಲಿ ಸೆಪ್ಟೆಂಬರ್‌ 2ರವರೆಗೆ ಹಾಗೂ ರಾಜಸ್ತಾನ, ಮಧ್ಯ ಮಹಾರಾಷ್ಟ್ರ, ಮರಾಥವಾಡದಲ್ಲಿ ಸೆಪ್ಟೆಂಬರ್ 1ರವರೆಗೂ ಅಧಿಕ ಮಳೆಯಾಗುವ ಸೂಚನೆ ನೀಡಲಾಗಿದೆ. ಈ ಕೆಳಗಿನ ರಾಜ್ಯಗಳಲ್ಲಿ ಇನ್ನಷ್ಟು ದಿನ ಮಳೆ ಮುಂದುವರೆಯಲಿರುವುದಾಗಿ ತಿಳಿಸಿದೆ. ಮುಂದೆ ಓದಿ..

ಸೆಪ್ಟೆಂಬರ್‌ 1ರಂದು ಕೊಂಕಣ, ಗೋವಾ ಹಾಗೂ ಗುಜರಾತ್‌ನಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ. ಸೋಮವಾರ ಪಶ್ಚಿಮ ಬಂಗಾಳ, ಸಿಕ್ಕಿಂ ಹಾಗೂ ಅಸ್ಸಾಂ, ಮೇಘಾಲಯದಲ್ಲಿ ಭಾರೀ ಮಳೆಯಾಗಿ ನಂತರ ಮಳೆ ಪ್ರಮಾಣ ತಗ್ಗಲಿದೆ ಎಂದು ತಿಳಿಸಿದೆ. ದೆಹಲಿಯಲ್ಲಿ ಈ ವಾರವಿಡೀ ಚದುರಿದ ಮಳೆಯಾಗುವುದಾಗಿ ಹೇಳಿದೆ. ಒಡಿಶಾದಲ್ಲಿ ಅಧಿಕ ಮಳೆ ಸೂಚನೆಯೊಂದಿಗೆ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರಾಖಂಡದಲ್ಲಿ ಆಗಸ್ಟ್‌30, ಉತ್ತರ ಪ್ರದೇಶದಲ್ಲಿ ಆಗಸ್ಟ್‌ 31ರಂದು ಅಧಿಕ ಪ್ರಮಾಣದಲ್ಲಿ ಮಳೆಯಾಗುವುದಾಗಿ ತಿಳಿಸಿದೆ.

 

ಆಗಸ್ಟ್‌ 30ರಂದು ಕೇರಳ, ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್‌, ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಕೇರಳದ ಒಂಬತ್ತು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಟ್ಟಾಯಂ, ಎರ್ನಾಕುಲಂ ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಅಧಿಕ ಅಲರ್ಟ್ ನೀಡಲಾಗಿದೆ. ನೈಋತ್ಯ ಮಾರುತಗಳು 40-50 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದ್ದು, ಕಡಲ ತೀರಗಳಲ್ಲಿ ಮೀನುಗಾರಿಕೆಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಮಳೆ ಮುಂದುವರೆಯುವ ಸೂಚನೆಯನ್ನು ನೀಡಲಾಗಿದೆ. ರಾಜ್ಯದ ಹದಿನಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಮಳೆ ಅಬ್ಬರ ಹೆಚ್ಚಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಕೋಲಾರದಲ್ಲಿ ಸೋಮವಾರ ಮಳೆ ತೀವ್ರತೆ ಹೆಚ್ಚಾಗಲಿರುವುದಾಗಿ ಇಲಾಖೆ ತಿಳಿಸಿದೆ.

 

 

1 COMMENT

LEAVE A REPLY

Please enter your comment!
Please enter your name here