ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ಕ್ಯಾಪ್ಟನ್ ಆಗುವ ಕಾಲ ಸನ್ನಿಹಿತವಾಗಿದೆ ಎಂದು ನಿನ್ನೆಯಷ್ಟೇ ನಾವು ವಿಶ್ಲೇಷಿಸಿದ್ದೆವು. ಅಷ್ಟೇ ಅಲ್ಲ ರಾಹುಲ್ ಟೀಮ್ ಇಂಡಿಯಾದ ಭವಿಷ್ಯದ ನಾಯಕ ಅನ್ನೋದನ್ನು ಕೂಡ ಈ ಹಿಂದಿನಿಂದಲೂ ಗಟ್ಟಿಯಾಗಿ ಹೇಳುತ್ತಿದ್ದೇವೆ. ಆ ದಿನ ಇದೀಗ ಕೂಡಿ ಬಂದೇ ಬಿಟ್ಟಿದೆ. ರಾಹುಲ್ ಟೀಮ್ ಇಂಡಿಯಾವನ್ನು ಮುನ್ನಡೆಸುವ ಭವಿಷ್ಯ ನಿಜವಾಗುತ್ತಿದೆ.
ಮಾರ್ಚ್ 12ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಗೆ ಟೀಮ್ ಇಂಡಿಯಾದ ಚುಕ್ಕಾಣಿಯನ್ನು ಕನ್ನಡಿಗ ಕೆ.ಎಲ್ ರಾಹುಲ್ ಹಿಡಿಯುವ ಸಾಧ್ಯತೆ ಹೆಚ್ಚಿದೆ. ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ಎಲ್ಲಾ ಐದು ಪಂದ್ಯಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದ ವಿರಾಟ್ ಕೊಹ್ಲಿ ಬಳಗ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಅವಮಾನ ಎದುರಿಸಿದೆ.
ಟಿ20 ಸರಣಿ ಶ್ರೇಷ್ಠ ಆಗಿದ್ದ ಹಾಗೂ ಏಕದಿನ ಸರಣಿಯಲ್ಲಿ ತಂಡ ಸೋತರೂ ವೈಯಕ್ತಿಕವಾಗಿ ಅದ್ಭುತ ಪ್ರದರ್ಶನ ತೋರಿ ಗಮನ ಸೆಳೆದಿದ್ದ ಕೆ.ಎಲ್ ರಾಹುಲ್ ಅನುಪಸ್ಥಿತಿ ಟೆಸ್ಟ್ನಲ್ಲಿ ಕಾಡಿತ್ತು. ಮುಂದಿನ ಟೂರ್ನಿಗಳಿಂದ ರಾಹುಲ್ಗೆ ಟೆಸ್ಟ್ ತಂಡದಲ್ಲೂ ಖಾಯಂ ಮಣೆ ಹಾಕಬೇಕು ಎಂಬ ಕೂಗು ಕೇಳಿಬಂದಿದೆ.
ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯಿಂದ ನಾಯಕ ವಿರಾಟ್ ಕೊಹ್ಲಿ ವಿರಾಮ ಬಯಸಿದ್ದಾರೆ ಎನ್ನಲಾಗಿದೆ. ಸತತ ಟೂರ್ನಿಗಳಿಂದ ಬಳಲಿರುವ ಕೊಹ್ಲಿ ಹಾಗೂ ಗಾಯಗೊಂಡಿರುವ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್ ತಂಡದ ಸಾರಥ್ಯ ವಹಿಸಿಕೊಳ್ಳೋದು ಕನ್ಫರ್ಮ್ ಆಗಿದೆ! ಈ ನಡುವೆ ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ನಾಯಕ ಸ್ಥಾನದ ರೇಸಲ್ಲಿದ್ದಾರೆ. ಅನುಭವದ ಆಧಾರದಲ್ಲಿ ಧವನ್ಗೆ ಮಣೆ ಹಾಕಬಹುದು.
ಆದರೆ, ಭವಿಷ್ಯದ ನಾಯಕ ಎಂದೇ ಕರೆಯಲ್ಪಡುತ್ತಿರುವ ರಾಹುಲ್ಗೆ ಮೊದಲ ಆದ್ಯತೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವೂ ಹೌದು. ಯಾವ್ದೇ ಕ್ರಮಾಂಕದಲ್ಲೂ ಅದ್ಭುತ ಬ್ಯಾಟಿಂಗ್ ಮಾಡುವ ತಾಕತ್ತು ಹೊಂದಿರುವ ರಾಹುಲ್ ವಿಕೆಟ್ ಕೀಪರ್ ಆಗಿಯೂ ಯಶ ಕಂಡಿದ್ದಾರೆ. ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20ಯಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದರಿಂದ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಕೆ ಎಲ್ ರಾಹುಲ್ ಯಶಸ್ವಿಯಾಗಿ ತಂಡವನ್ನು ಮುನ್ನೆಡೆಸಿದ್ದನ್ನೂ ಸ್ಮರಿಸಬಹುದು.