ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಜನ ತತ್ತರಿಸಿ ಹೋಗಿದ್ದು, ಆಕ್ಸಿಜನ್ ಕೊರತೆಯಿಂದಾಗಿ ನರಳಾಡುತ್ತಿದ್ದಾರೆ. ಇನ್ನು ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದು ದೂರದ ಮಾತು ಎನ್ನುವಂತಾಗಿದೆ. ಹೀಗಿರುವಾಗ ನಟಿ ಶೃತಿ ಹರಿಹರನ್ ಸಹ ತಮ್ಮ ಸ್ನೇಹಿತರೊಬ್ಬರಿಗೆ ಬೆಡ್ ಕೊಡಿಸಲು 13 ಗಂಟೆಗಳ ಕಾಲ ಪರದಾಡಿದ್ದು, ಈ ಕುರಿತು ತಮ್ಮ ಸಂಕಷ್ಟದ ಜೊತೆಗೆ ನೀವು ಬೆಡ್ ಪಡೆಯಬೇಕಾದರೆ ಏನೆಲ್ಲ ಮಾಡಬೇಕೆಂದು ಸಹ ಸಲಹೆ ನೀಡಿದ್ದಾರೆ.
ಈ ಕುರಿತು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಕೊರೊನಾ ಸೋಂಕಿತ ನನ್ನ ಸ್ನೇಹಿತರೊಬ್ಬರಿಗೆ ಐಸಿಯು ಬೆಡ್ ಕೊಡಿಸಲು ಹರಸಾಹಸ ಪಡಬೇಕಾಯಿತು. ನಿನ್ನೆ ಬರೋಬ್ಬರಿ 13 ಗಂಟೆಗಳ ಕಾಲ ಐಸಿಯು ಬೆಡ್‍ಗಾಗಿ ಪರದಾಡಿದ್ದೇವೆ. ಇದರಿಂದಾಗಿ ಅದ್ಭುತ ಪಾಠವನ್ನು ಕಲಿತಿದ್ದೇವೆ ಎಂದು ತಿಳಿಸಿದ್ದಾರೆ.
ಅಲ್ಲದೆ ರಾಜಧಾನಿಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಪಡೆಯಬೇಕಿದ್ದಲ್ಲಿ ಈ ಕೆಳಗಿನ ನಿಯಮಗಳನ್ನು ಪಾಲಿಸಿ ಎಂದು ಬರೆದುಕೊಂಡಿದ್ದಾರೆ. ಬೆಡ್ ಪಡೆಯುವ ಹಂತಗಳ ಕುರಿತು ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ ಯಾರಿಗಾಗಿ 13 ಗಂಟೆಗಳ ಕಾಲ ಬೆಡ್‍ಗಾಗಿ ಪರದಾಡಿದೆವೋ ಅವರು ನಿಧನರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಐಸಿಯು ಬೆಡ್ ಸಿಗದ ಕಾರಣ ಅವರು ಅಸುನೀಗಿದ್ದಾರೆ ಎಂಬ ಬೇಸರದ ವಿಷಯವನ್ನು ತಿಳಿಸಿದ್ದಾರೆ.
ಇತ್ತೀಚೆಗೆ ನಟ ಜಗ್ಗೆಶ್ ಸಹೋದರ ನಟ ಕೋಮಲ್ ಅವರಿಗೆ ಚಿಕಿತ್ಸೆ ಕೊಡಿಸಲು ಪರದಾಡಬೇಕಾಯಿತು ಎಂಬ ವಿಚಾರವನ್ನು ಸಹ ಜಗ್ಗೇಶ್ ಸಾಮಾಜಿಕ ಜಾಲತಾಣಗಳಲ್ಲಿ ಹಮಚಿಕೊಂಡಿದ್ದರು. ಸಲ್ಲದೆ ಕೊರೊನಾಗೆ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಪತಿ ಕೋಟಿ ರಾಮು ಅವರು ಸಹ ಸಾವನ್ನಪ್ಪಿದ್ದಾರೆ. ಹೀಗಾಗಿ ಪರಿಸ್ಥಿತಿ ತುಂಬಾ ಭೀಕರವಾಗಿದೆ.