ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್
ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆದಿದೆ. ಇಂದು ಮಧ್ಯಾಹ್ನ 12ರಿಂದ 12:30 ವರೆಗೆ ಬಾಗಿಲು ತೆರೆಯಲಾಗಿದ್ದು, ನಾಳೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು.
ಬಾಗಿಲು ತೆರೆಯುವ ಮುನ್ನ ಐದು ಜನ ಪುರೋಹಿತರ ತಂಡದೊಂದಿಗೆ ದೇವಿಯ ಒಡವೆಗಳು ತರಲಾಯಿತು. ಬಳಿಕ ಅರಸರ ವಂಶಸ್ಥರು ಬಾಳೆಕಂಬ ಕತ್ತರಿಸಿ, ದೇವಾಲಯದ ಗರ್ಭಗುಡಿ ಬಾಗಿಲನ್ನು ತೆರೆದಿದ್ದಾರೆ. ದರ್ಶನವು 13 ದಿನಗಳ ಕಾಲ ನಡೆಯಲಿದೆ. ನಾಳೆಯಿಂದ ಅಕ್ಟೋಬರ್ 22ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಇರುತ್ತದೆ. ಇಂದು ಮತ್ತು ಅಕ್ಟೋಬರ್ 23ರಂದು ಕೊನೆಯ ದಿನ ಭಕ್ತರಿಗೆ ದರ್ಶನ ಸಿಗುವುದಿಲ್ಲ.
ಹಾಸನಾಂಬ ದೇವಿಯ ಸನ್ನಿಧಾನದಲ್ಲಿ ಅರ್ಚಕರ ತಂಡ ವಿವಿಧ ಪೂಜಾ ಕೈಂಕಾರ್ಯಗಳನ್ನು ನಿರ್ವಹಿಸುತ್ತಿದೆ. ಗರ್ಭಗುಡಿ ಬಾಗಿಲು ತೆರೆಯುವ ಸಂದರ್ಭದಲ್ಲಿ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾಡಳಿತದ ಸಹಕಾರದೊಂದಿಗೆ ಈ ಮಹತ್ತರ ಕಾರ್ಯವನ್ನು ನೆರವೇರಿಸಲಾಗಿದೆ.