ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹಾಸನದ ಹಾಸನಾಂಬೆ ದೇವಾಲಯಕ್ಕೆ ಬಂದು ದೇವಿಯ ದರ್ಶನ ಪಡೆದರು.
ಮಂಗಳವಾರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೇವಿಯ ದರ್ಶನ ಪಡೆದಿದ್ದರು. ಅವರ ನಂತರ ಬುಧವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಿಎಂ ಸಿದ್ದರಾಮಯ್ಯ ದೇವಾಲಯಕ್ಕೆ ಆಗಮಿಸಿದರು.
ಜಿಲ್ಲಾಡಳಿತವು ಸಿಎಂಗೆ ವಿಶೇಷ ವಾಹನ ಸೌಲಭ್ಯ ಒದಗಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಸಿಎಂ ಅವರನ್ನು ಸ್ವಾಗತಿಸಿದರು. ಸಿಎಂ ಬಂದಾಗ ಜಾನಪದ ಕಲಾವಿದರು ಡೋಲು, ತಾಳ, ಕೊಂಬು, ಕಂಸಾಳೆ ಮುಂತಾದ ವಾದ್ಯಗಳೊಂದಿಗೆ ಸ್ವಾಗತಿಸಿದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರೂ ಸಿಎಂ ಜೊತೆಗಿದ್ದರು. ನಂತರ ಜಿಲ್ಲಾಡಳಿತದವರು ಮಂಗಳವಾದ್ಯಗಳೊಂದಿಗೆ ಸಿಎಂ ಅವರನ್ನು ದೇವಿ ದರ್ಶನಕ್ಕೆ ಕರೆದೊಯ್ದರು.
ಕಳೆದ ಎರಡು ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಈ ಬಾರಿ ಅವರು ಮೂರನೇ ಬಾರಿ ದೇವಿ ದರ್ಶನ ಪಡೆದರು. ದೇವಿಯ ದರ್ಶನದ ನಂತರ ಅವರು ದರ್ಬಾರ್ ಗಣಪತಿ ಮತ್ತು ಸಿದ್ದೇಶ್ವರಸ್ವಾಮಿ ದೇವರ ದರ್ಶನವನ್ನೂ ಪಡೆದರು.
ಈ ಸಂದರ್ಭದಲ್ಲಿ ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಡಿಸಿ ಕೆ.ಎಸ್. ಲತಾ ಕುಮಾರಿ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಮತ್ತು ಎಸ್ಪಿ ಮಹಮ್ಮದ್ ಸುಜೀತಾ ಉಪಸ್ಥಿತರಿದ್ದರು. ಸಿಎಂ ಆಗಮನದ ಹಿನ್ನೆಲೆಯಲ್ಲಿ ದೇವಾಲಯದ ಬಳಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು.