ಟೆನಿಸ್ ಕೃಷ್ಣ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ಕಾಮಿಡಿಯನ್. ಟೆನ್ನಿಸ್ ಕೃಷ್ಣ ಅವರನ್ನು ಬೆಳ್ಳಿ ತೆರೆಯ ಮೇಲೆ ಕಂಡರೆ ಸಾಕು ಚಿತ್ರಮಂದಿರದಲ್ಲಿ ಕುಳಿತಿದ್ದ ವೀಕ್ಷಕರ ಬಳಗ ಒಂದೊಮ್ಮೆ ಕಿರುಚಿ ಶಿಳ್ಳೆ ಹೊಡೆಯುತ್ತಿತ್ತು. ನಟನೆಗಿಂತ ಹೆಚ್ಚು ಚಪ್ಪಾಳೆ ಶಿಳ್ಳೆಗಳನ್ನು ಟೆನ್ನಿಸ್ ಕೃಷ್ಣ ಅವರು ಹಲವಾರು ಚಿತ್ರಗಳಲ್ಲಿ ಗಿಟ್ಟಿಸಿಕೊಂಡಿದ್ದೂ ಇದೆ. ಹೀಗೆ ಸಕ್ಸಸ್ ಪಡೆದ ಟೆನ್ನಿಸ್ ಕೃಷ್ಣ ಅವರು ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಸ್ಟಾರ್ ಕಾಮಿಡಿಯನ್ ಆದರು. ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದಂತಹ ಟೆನ್ನಿಸ್ ಕೃಷ್ಣ ಅವರಿಗೆ ಇಂದು ಕನ್ನಡ ಚಿತ್ರರಂಗದಲ್ಲಿ ಅವಕಾಶಗಳೇ ಇಲ್ಲ.
ಇತ್ತೀಚೆಗಷ್ಟೇ ಟೆನಿಸ್ ಕೃಷ್ಣ ಅವರು ರಾಜಲಕ್ಷ್ಮಿ ಎಂಬ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮದವರ ಮುಂದೆ ಚಿತ್ರರಂಗದಲ್ಲಿ ತಮಗಾಗುತ್ತಿರುವ ಅನ್ಯಾಯದ ಕುರಿತು ಮಾತನಾಡಿದರು.. ಇಷ್ಟು ದಿನ ಮಾತನಾಡಬಾರದು ಎಂದು ಸುಮ್ಮನಿದ್ದೆ ಆದರೆ ಇದೀಗ ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರಿಸಲು ಸರಿಯಾದ ಸಮಯ ಎಂದು ಹೇಳಿದ ಅವರು ಚಿತ್ರರಂಗದಲ್ಲಿ ಹಿರಿಯ ನಟರಿಗೆ ಮನ್ನಣೆ ಇಲ್ಲ , ಹಾಗಂತ ನಾವೇನೂ ಸುಮ್ಮನೆ ಕುಳಿತಿಲ್ಲ ನಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು ಸ್ಟೇಜ್ ಶೋ ನೀಡುತ್ತಿದ್ದೇವೆ ಎಂದು ಟೆನಿಸ್ ಕೃಷ್ಣ ಅವರು ತಮ್ಮ ಅಳಲನ್ನು ತೋಡಿಕೊಂಡರು. ನನ್ನೊಬ್ಬನಿಗೆ ಚಾನ್ಸ್ ಕೊಡಿ ಅಂತ ನಾನು ಕೇಳಿಲ್ಲ ಬದಲಾಗಿ ಹಿರಿಯ ನಟರಿಗೆಲ್ಲ ಒಂದೊಂದು ಚಿತ್ರದಲ್ಲಿ ಅವಕಾಶ ಮಾಡಿಕೊಡಿ ಎಂದು ಯುವ ಚಿತ್ರರಂಗಕ್ಕೆ ಟೆನ್ನಿಸ್ ಕೃಷ್ಣ ಅವರು ಮಾಧ್ಯಮದ ಮೂಲಕ ಕೇಳಿಕೊಂಡರು.