ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣ: ನ್ಯಾಯಾಂಗ ತನಿಖೆಗೆ ಆರ್. ಅಶೋಕ್ ಆಗ್ರಹ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ದೇಶಾದ್ಯಂತ ಸುದ್ದಿಯಾಗಿದ್ದು, ಇದರ ಸತ್ಯಾಂಶ ಜನರಿಗೆ ತಿಳಿಯಬೇಕಿದೆ. ಆದ್ದರಿಂದ ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್. ಅಶೋಕ್ ಅವರು ಇಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರೊಂದಿಗೆ ಸಂತ್ರಸ್ತ ಮಹಿಳೆಯ ಮನೆಗೆ ಭೇಟಿ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಸರ್ಕಾರ ಮತ್ತು ಪೊಲೀಸರ ನಡೆ ಪ್ರಶ್ನಾರ್ಹವಾಗಿದೆ ಎಂದು ಆರೋಪಿಸಿದರು.
“ಆ ಮಹಿಳೆಯೇ ತನ್ನ ಬಟ್ಟೆ ಬಿಚ್ಚಿಕೊಂಡಳು ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಅಲ್ಲಿ ಇದ್ದ ಪೊಲೀಸರು ಏನು ಮಾಡುತ್ತಿದ್ದರು? ಸುಮಾರು 40 ಪೊಲೀಸರು, ಪೊಲೀಸ್ ವ್ಯಾನ್, ಚಾಲಕ ಎಲ್ಲವೂ ನಿಮ್ಮದೇ ಇದ್ದಾಗ ಈ ಘಟನೆ ತಡೆಯಲು ಸಾಧ್ಯವಾಗಲಿಲ್ಲವೇ?” ಎಂದು ಆರ್. ಅಶೋಕ್ ಪ್ರಶ್ನಿಸಿದರು. ಈ ಹೇಳಿಕೆಗಳು ಸಂಪೂರ್ಣ ಸುಳ್ಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಪೊಲೀಸರ ಮೇಲೆಯೇ ಗಂಭೀರ ಆರೋಪ ಮಾಡಿರುವ ಆರ್. ಅಶೋಕ್, “ಇತ್ತೀಚೆಗೆ 7 ಕೋಟಿ ರೂ. ಬ್ಯಾಂಕ್ ದರೋಡೆ ಪ್ರಕರಣದಲ್ಲೂ ಪೊಲೀಸರ ಪಾತ್ರದ ಬಗ್ಗೆ ಆರೋಪಗಳಿವೆ. ಅದೇ ಪೊಲೀಸರು ದುಶ್ಶಾಸನನಂತೆ ವರ್ತಿಸಿ ಮಹಿಳೆಯ ಮೇಲೆ ಹಲ್ಲೆ ಮಾಡಿ ವಿವಸ್ತ್ರಗೊಳಿಸಿದ ಘಟನೆ ನಡೆದಿದೆ” ಎಂದು ಕಟುವಾಗಿ ಟೀಕಿಸಿದರು.






