ಕೇರಳದಲ್ಲಿ ಮಂಗಳವಾರ ಮತ್ತೆ ಇಬ್ಬರಲ್ಲಿ ಝಿಕಾ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಪ್ರಕರಣಗಳ ಒಟ್ಟು ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
“ಮಂಗಳವಾರ 35 ವರ್ಷದ ಪುರುಷ ಹಾಗೂ 41 ವರ್ಷದ ಮಹಿಳೆಯಲ್ಲಿ ಝಿಕಾ ವೈರಸ್ ದೃಢಪಟ್ಟಿದೆ. ಕೇರಳದಲ್ಲಿ ಝಿಕಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ. ರಾಜ್ಯ ಸರ್ಕಾರ ವೈರಸ್ ನಿಯಂತ್ರಣ ಸಂಬಂಧ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಜುಲೈ 8ರಂದು ಕೇರಳದಲ್ಲಿ ಮೊದಲು ಝಿಕಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಮೊದಲು ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದ್ದು, ನಂತರ ಹತ್ತು ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.
“24 ವರ್ಷದ ಮಹಿಳೆಯೊಬ್ಬರಲ್ಲಿ ಮೊದಲು ಈ ಸೋಂಕು ಪತ್ತೆಯಾಗಿತ್ತು. ಜೂನ್ 28ರಂದು ಈ ಮಹಿಳೆ ಜ್ವರ, ತಲೆ ನೋವು ಹಾಗೂ ಕೆಂಪು ಕಲೆಗಳ ಕಾರಣವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಈ ವೈರಸ್ ಪತ್ತೆಯಾಗಿದೆ. ಈ ಸೋಂಕಿನ ಶಂಕೆ ಇದ್ದ ಹದಿಮೂರು ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಣು ಪತ್ತೆ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಹತ್ತು ಮಾದರಿಗಳು ಪಾಸಿಟಿವ್ ಬಂದಿವೆ” ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದರು. ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಕೊರೊನಾ ಸೋಂಕಿನ ನಡುವೆ ಝಿಕಾ ವೈರಸ್ ಮತ್ತೊಂದು ಆತಂಕ ತಂದೊಡ್ಡಿದೆ.