ಭುವನೇಶ್ವರ: ಟ್ರಕ್ ಚಾಲಕರೊಬ್ಬರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣ ನೀಡಿ ಆರ್‌ಟಿಒ 1,000 ರೂಪಾಯಿ ದಂಡ ವಿಧಿಸಿರುವ ಘಟನೆ ಒಡಿಶಾದಲ್ಲಿ ವರದಿಯಾಗಿದೆ.
ಒಡಿಶಾದ ಗಾಂಜಾಂ ಜಿಲ್ಲೆಯ ಪ್ರಮೋದ್ ಕುಮಾರ್ ಸ್ವೈನ್ ಟ್ರಕ್ ಚಾಲಕರಾಗಿದ್ದು, ತಮ್ಮ ಟ್ರಕ್‍ನ ಪರ್ಮಿಟ್‍ನ್ನು ನವೀಕರಿಸಲು ಸ್ಥಳೀಯ ಆರ್‌ಟಿಒ ಕಚೇರಿಗೆ ತೆರಳಿದ್ದರು. ಈ ವೇಳೆ ಚಲನ್ ಕಟ್ಟಲು ತೆರಳಿದಾಗ ಟ್ರಕ್‍ನಲ್ಲಿ ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಿರುವುದಕ್ಕಾಗಿ ವಾಹನದ ರಿಜಿಸ್ಟರ್ ನಂಬರ್ ಗೆ ದಂಡ ಹಾಕಲಾಗಿದೆ. ಅದನ್ನು ಕಟ್ಟಿದ ಬಳಿಕ ನವೀಕರಿಸಲಾಗುದು ಎಂದು ತಿಳಿಸಿದ್ದಾರೆ. ನಂತರ ಸ್ವೈನ್ ದಂಡ ಕಟ್ಟಿದ ಬಳಿಕ ತಮ್ಮ ಟ್ರಕ್‍ನ್ನು ನವೀಕರಿಸಿಕೊಂಡಿದ್ದಾರೆ.
ಈ ಕುರಿತು ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸ್ವೈನ್, ನಾನು ಕಳೆದ ಮೂರು ವರ್ಷಗಳಿಂದ ಟ್ರಕ್ ಚಾಲನೆ ಮಾಡುತ್ತಿದ್ದು, ಟ್ರಕ್‍ನಲ್ಲಿ ನೀರನ್ನು ಸರಬರಾಜು ಮಾಡುತ್ತಿದ್ದೇನೆ. ಇದೀಗ ನಾನು ಟ್ರಕ್‍ನ ಪರ್ಮಿಟ್ ನವೀಕರಿಸಲೆಂದು ಆರ್‌ಟಿಒ ಕಚೇರಿಗೆ ತೆರಳಿದ್ದೆ. ಈ ವೇಳೆ ನನಗೆ ಟ್ರಕ್‍ನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಿರುವುದಕ್ಕಾಗಿ ದಂಡ ಹಾಕಿರುವ ಕುರಿತು ತಿಳಿದು ಬಂದಿದ್ದು, ಅಧಿಕಾರಿಗಳು ವಿನಾಕಾರಣ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದರ ವಿರುದ್ಧ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.