ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ವಿಶ್ವಾಸ ಮತಯಾಚನೆ ಕೊನೆಗೂ ಮುಗಿದಿದೆ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ‘ವಿಶ್ವಾಸ’ ದಲ್ಲಿ ಸೋತಿದ್ದಾರೆ. ಬಹುಮತ ಕಳೆದುಕೊಂಡ ಮೈತ್ರಿ ಸರ್ಕಾರ 14 ತಿಂಗಳ ಅಧಿಕಾರದಿಂದ ನಿರ್ಗಮಿಸಿದೆ. ಮೈತ್ರಿ ಪತನದಿಂದ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ತಯಾರಾಗಿದೆ.
ರಾಜೀಯಾಗದ ಅತೃಪ್ತರ ಆಟ ಕೊನೆಗೂ ಮೈತ್ರಿಯನ್ನು ಮುರಿಸಿದೆ. ಗುರುವಾರ, ಶುಕ್ರವಾರ ಕಾಲಹರಣ ತಂತ್ರದಲ್ಲಿ ಗೆದ್ದು ಸೋಮವಾರಕ್ಕೆ ವಿಶ್ವಾಸ ಮತಯಾಚನೆ ಮಾಡುವುದಾಗಿ ಮುಂದಕ್ಕೆ ದಬ್ಬಿದ್ದ ಮೈತ್ರಿ.. ಸೋಮವಾರ ರಾತ್ರಿ 11.45ರವರೆಗೆ ಅದೇ ಕಾಲಹರಣ ತಂತ್ರ ಅನುಸರಿಸಿ ಇವತ್ತಿನವರೆಗೆ ಉಸಿರಾಡಿತ್ತು. ಇಂದು ಅಂತಿಮವಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಿದರು.
ಇಂದು ಸದನದಲ್ಲಿ 205 ಮಂದಿ ಸದಸ್ಯರು ಇದ್ದರು. ಈ ಸದಸ್ಯ ಬಲದ ಪ್ರಕಾರ 103 ಮ್ಯಾಜಿಕ್ ನಂಬರ್ ಆಗಿತ್ತು. 205 ಮತಗಳಲ್ಲಿ ಮೈತ್ರಿ ಪರವಾಗಿ 99 ಮತಗಳು, ವಿರುದ್ಧ (ಬಿಜೆಪಿ ಪರ)105 ಮತಗಳು ಬಂದವು. ಅಲ್ಲಿಗೆ ಬಿಜೆಪಿಗೆ ಬಹುಮತ ಬಂದಾತಾಯಿತು. ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಬಗ್ಗೆ ಪ್ರಸ್ತಾಪ ಸಲ್ಲಿಸಲಿದ್ದಾರೆ.
ವಿಶ್ವಾಸ ಮತದಲ್ಲಿ ಯಶಸ್ಸು ಸಿಗದೆ ಸರ್ಕಾರ ಪತನವಾಗುತ್ತಿದ್ದಂತೆ ಕುಮಾರಸ್ವಾಮಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಎರಡನೇ ಬಾರಿಯೂ ಪೂರ್ಣಾವಧಿಯಲ್ಲಿ ಸಿಎಂ ಖುರ್ಚಿಯಲ್ಲಿ ಕೂರಲು ಸಾಧ್ಯವಾಗಿಲ್ಲ.