ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಮಾತನಾಡಿದ್ದಾರೆ. ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿದ್ದ ಐದನೇ ಟೆಸ್ಟ್ ಪಂದ್ಯ ಕೋವಿಡ್-19 ಭೀತಿಯಿಂದ ರದ್ದಾಗಿತ್ತು. ಐದು ಪಂದ್ಯಗಳ ಟೆಸ್ಟ್ ಸರಣಿಯ ವಿಜೇತರನ್ನು ನಿರ್ಧರಿಸಲಿದ್ದ ಕೊನೇಯ ಟೆಸ್ಟ್ ರದ್ದಾದ ಬಳಿಕ ಭಾರತೀಯ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಲುವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಪ್ರಯಾಣಿಸಿದ್ದಾರೆ.
ಟೀಮ್ ಇಂಡಿಯಾದ ಕ್ಯಾಂಪ್‌ನಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಟೆಸ್ಟ್ ಸರಣಿ ಪೂರ್ಣಗೊಳ್ಳದೆ ಕೊನೆಗೊಂಡಿತ್ತು. ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, ಸರಣಿ ಮುಗಿಯುವುದಕ್ಕೂ ಮುನ್ನವೇ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಐಪಿಎಲ್‌ಗಾಗಿ ಯುಎಇಗೆ ತೆರಳಬೇಕಾಗಿ ಬಂದಿದ್ದು ದುರದೃಷ್ಟಕರ ಎಂದಿದ್ದಾರೆ.
ಆರ್‌ಸಿಬಿ ಡಿಜಿಟಲ್ ಮೀಡಿಯಾ ವೇದಿಕೆ ಆರ್‌ಸಿಬಿ ಬೋಲ್ಡ್ ಡೈರೀಸ್ ಸರಣಿಯ ವಿಡಿಯೋವೊಂದರಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ, “ಇಂಗ್ಲೆಂಡ್‌ನಲ್ಲಿ ನಾವು ಅವಧಿಗೂ ಮುನ್ನವೇ ಟೆಸ್ಟ್ ಸರಣಿ ಕೊನೆಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ದುರದೃಷ್ಟಕರ. ಆದರೆ ಕೋವಿಡ್-19 ಸೋಂಕಿನ ಭೀತಿ ಇರುವಾಗ ಎಲ್ಲವೂ ಈಗ ಅನಿಶ್ಚಿತ. ಯಾವ ಕ್ಷಣದಲ್ಲಿ ಯಾವ ವಿಚಾರ ಬೇಕಾದರೂ ನಡೆಯಬಹುದು. ಆಶಾದಾಯಕವಾಗಿ, ನಾವು ಒಳ್ಳೆಯ, ಬಲಿಷ್ಠ ಮತ್ತು ಭದ್ರತೆಯಿರುವ ಪರಿಸರದಲ್ಲಿ ಈಗ ಇದ್ದೇವೆ. ಗುಣಮಟ್ಟದ ಐಪಿಎಲ್‌ನಲ್ಲಿ ನಾವೀಗ ಇದ್ದೇವೆ. ಐಪಿಎಲ್ ಈ ದ್ವಿತೀಯ ಹಂತದ ಪಂದ್ಯಗಳು ಉತ್ಸುಕತೆಯಿಂದ ಕೂಡಿರಲಿದೆ. ಈಗ ಆರ್‌ಸಿಬಿಗೆ ಮತ್ತು ಮುಂದೆ ಟಿ20 ವಿಶ್ವಕಪ್ ವೇಳೆ ಭಾರತೀಯ ತಂಡಕ್ಕೆ ಇಂಥ ಭದ್ರತೆಯ ಪರಿಸರ ತುಂಬಾ ಪ್ರಮುಖ ಸಂಗತಿಯಾಗಿರಲಿದೆ,” ಎಂದು ಕೊಹ್ಲಿ ಹೇಳಿದ್ದಾರೆ.