ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್‌ಗೆ ಆರು ಸಿಕ್ಸರ್ ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ವೆಸ್ಟ್ ಇಂಡೀಸ್ ನಾಯಕ ಕೈರಾನ್ ಪೊಲಾರ್ಡ್ ಭಾಜನರಾಗಿದ್ದಾರೆ. ಅಂಟಿಗುವಾದಲ್ಲಿ ಬುಧವಾರ ನಡೆದಿದ್ದ ಶ್ರೀಲಂಕಾ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ಈ ದಾಖಲೆ ಮಾಡಿದ್ದಾರೆ.
ಅಕಿಲಾ ಧನಂಜಯ್ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡ ತಮ್ಮ ಹಿಂದಿನ ಓವರ್‌ನಲ್ಲಿಯೇ ಕೈರಾನ್ ಪೊಲಾರ್ಡ್ ಕ್ರೀಸ್‌ಗೆ ಆಗಮಿಸಿದ್ದರು. ಹ್ಯಾಟ್ರಿಕ್ ವಿಕೆಟ್ ಕಿತ್ತ ಜೋಶ್‌ನಲ್ಲಿ ಮತ್ತೊಂದು ಓವರ್‌ನಲ್ಲಿ ಮ್ಯಾಜಿಕ್ ಮಾಡಲು ಬಂದ ಧನಂಜಯ್‌ಗೆ ಮೊದಲನೇ ಎಸೆತದಿಂದಲೇ ಪೋಲಾರ್ಡ್ ಸಿಕ್ಸರ್‌ಗಳ ಸುರಿಮಳೆಗೈದರು.
ಕೈರಾನ್ ಪೊಲಾರ್ಡ್‌ಗೂ ಮೊದಲು ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದರು. 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್‌ಗೆ ಯುವಿ ಆರು ಭರ್ಜರಿ ಸಿಕ್ಸರ್ ಸಿಡಿಸಿದ್ದರು.
ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಓವರ್‌ಗೆ ಆರು ಸಿಕ್ಸರ್ ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ಕೈರಾನ್ ಪೊಲಾರ್ಡ್ ಭಾಜನರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. 2007ರ ಓಡಿಐ ವಿಶ್ವಕಪ್ ಟೂರ್ನಿಯಲ್ಲಿ ನೇದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಗಿಬ್ಸ್ ಈ ಮೈಲುಗಲ್ಲು ಸ್ಥಾಪಿಸಿದ್ದರು.