ಸ್ಯಾಂಡಲ್‍ವುಡ್‍ನಲ್ಲಿ ಹೊಸಬರ ಚಿತ್ರಗಳು ಸದ್ದು ಮಾಡುತ್ತಿವೆ…! ಇದೀಗ ಮತ್ತೊಂದು ಹೊಸತಂಡದ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಇದೇ ‘ ಲವ್ ಯು 2’.
ಒಂದೆರಡು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಜಸ್ಟ್ ಬಿ.ಕೆ (ಮಹೇಶ್) ನಿರ್ದೇಶನದ ಚೊಚ್ಚಲ ಚಿತ್ರವಿದು. ಇದಕ್ಕೆ ಬಂಡವಾಳ ಹಾಕಿರೋರು ಸಹ ಚಿತ್ರರಂಗಕ್ಕೆ ಹೊಸಮುಖ. ಪವನ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿರುವುದರ ಜೊತೆಗೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಕರ್ವ, ನನ್ನ ನಿನ್ನ ಪ್ರೇಮಕಥೆ, ತಾರೆ, ದಾದ ಈಸ್ ಬ್ಯಾಕ್ ಸೇರಿದಂತೆ ಕೆಲವೊಂದಿಷ್ಟು ಚಿತ್ರದಲ್ಲಿ ನಟಿಸಿರುವ ರಘುಭಟ್ ಈ ಚಿತ್ರದ ಮತ್ತೊಬ್ಬ ನಾಯಕ ನಟರು.
ಇವರು (ರಘುಭಟ್) ನಾಯಕ ನಟರಾಗಿ ಅಭಿನಯಿಸಿರುವ ಅನ್ವೇಷಿ ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ. ಇದರ ಜೊತೆಗೆ ಇವರ ಅಭಿನಯದ ಚಿತ್ರಾಲಿ, ಡ್ರೀಂ ಗರ್ಲ್ ಚಿತ್ರಗಳು ರಿಲೀಸ್‍ಗೆ ರೆಡಿಯಾಗಿವೆ. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಕಾಸುರ ಚಿತ್ರದಲ್ಲೂ ರಘುಭಟ್ ನಟಿಸಿದ್ದು, ಈ ಚಿತ್ರ ಕೂಡ ಶೀಘ್ರದಲ್ಲೇ ಕನ್ನಡಿಗರನ್ನು ತಲುಪಲಿದೆ.
ಕೀರ್ತಿ ಲಕ್ಷ್ಮಿ ಲವ್ ಯು 2ನಾಯಕಿ. ಲವ್ ಯು 2 ಎಂದರೆ ಎಂಬ ಶೀರ್ಷಿಕೆ ಕೇಳುತ್ತಿದ್ದಂತೆ ಇದೊಂದು ಪ್ರೇಮಕಥೆ ಅನಿಸುತ್ತೆ. ಇಬ್ಬರು ಹೀರೋ, ಒಬ್ಬರು ಹೀರೋಯಿನ್ ಎಂದರೆ ಇದೊಂದು ತ್ರಿಕೋನ ಪ್ರೇಮಕಥೆ ಎಂದೆನಿಸುವುದು ಸಹಜ. ಆದರೆ, ಇದು ಪ್ರೇಮಕಥೆ ಅಲ್ಲ..! ಕೇವಲ ಹೆಣ್ಣು –ಗಂಡಿನ ನಡುವೆ ಮೊಳಕೆಯೊಡೆಯುವ ಪ್ರೀತಿ, ಪ್ರೇಮ ಚಿತ್ರದ ವಸ್ತುವಲ್ಲ ಎನ್ನುತ್ತಿದೆ ಚಿತ್ರತಂಡ. ಮಂಡ್ಯದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡ ಕಥೆಯಂತೆ. ಇದು ಹುಡುಗ-ಹುಡುಗಿಯ ಪ್ರೀತಿ ಅಲ್ಲ, ಮನುಷ್ಯ ಪ್ರೀತಿಯನ್ನು ಸಾರುವ ಸಿನಿಮಾ ಅಂತೆ.
ಇಂದು ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಜಸ್ಟ್ ಬಿ.ಕೆ (ಮಹೇಶ್) ಅವರು, ಲವ್ ಯು 2 ಲವ್ ಸ್ಟೋರಿಯಲ್ಲ. ಮನುಷ್ಯ ಪ್ರೀತಿಯನ್ನು ಸಾರುವ ಚಿತ್ರ. ಒಂದು ನೈಜ ಘಟನೆಯನ್ನಿಟ್ಟುಕೊಂಡು ಸಮಾಜಕ್ಕೆ ಸಂದೇಶವೊಂದನ್ನು ಕೊಡುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
ಚಿತ್ರದ ನಾಯಕ ನಟ ಪವನ್ ಕುಮಾರ್ ಮಾತನಾಡಿ, ಚಿತ್ರದಲ್ಲಿ ತಾನೊಬ್ಬ ಎಂಎಲ್‍ಎ ಮಗ. ನಿತ್ಯ ಅಪ್ಪ ಅಮ್ಮನಿಂದ ಬೈಸಿಕೊಂಡು ಸಾಕಾಗಿ ಟ್ರಿಪ್ ಅಂತ ಹೊರಡುತ್ತೇನೆ. ನನ್ನ ಜೊತೆ ಗೆಳೆಯ, ಡಾಕ್ಟರ್ ಪಾತ್ರದಲ್ಲಿ ನಟಿಸಿರುವ ರಘುಭಟ್ ಬರುತ್ತಾರೆ. ಇಲ್ಲಿಂದ ಜರ್ನಿ ಶುರುವಾಗುತ್ತೆ ಎಂದು ಚಿತ್ರದ ಒಂದು ಎಳೆಯನ್ನು ಬಿಟ್ಟುಕೊಟ್ಟರು.
ನಾಯಕ ನಟ ರಘುಭಟ್ ಮಾತನಾಡಿ, ಈ ಚಿತ್ರದಲ್ಲಿ ನಾನು ಡಾಕ್ಟರ್. ಪವನ್ ಮತ್ತು ನಾನು ಒಂದು ಟ್ರಿಪ್ ಅಂತ ಹೊರಡುತ್ತೀವಿ. ಅಲ್ಲಿ ನಾಯಕಿ ಕೀರ್ತಿ ಪರಿಚಯ ಆಗುತ್ತೆ. ಪವನ್ ಮತ್ತು ನಾನು ಇಬ್ಬರೂ ಕೂಡ ಆಕೆಯನ್ನು ಪ್ರೀತಿಸ್ತೀವಿ. ಕೊನೆಯಲ್ಲಿ ಅವಳು ಯಾರಿಗೆ ಒಲಿಯುತ್ತಾಳೆ ಎನ್ನುವುದನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು. ಇಲ್ಲಿ ಕೇವಲ ಪ್ರೀತಿಗಿಂತ ಮಿಗಿಲಾಗಿ ಮಾನವೀಯ ಮೌಲ್ಯಗಳು, ಮನುಷ್ಯತ್ವದ ಬಗ್ಗೆ ಒಂದೊಳ್ಳೆ ಸಂದೇಶವನ್ನು ನೀಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಕರ್ತ, ನಿರೂಪಕ ಜಯ ಪ್ರಕಾಶ್ ಶೆಟ್ಟಿ ಅವರು, ಸೋಲು ಗೆಲುವು ಮುಖ್ಯವಲ್ಲ. ಪ್ರಯತ್ನ ಪ್ರಧಾನ. ಈ ವಿಷಯದಲ್ಲಿ ರವಿಚಂದ್ರನ್, ದ್ವಾರಕೇಶ್ ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದಲ್ಲಿ ಮೂರು ಹಾಡುಗಳಿದ್ದು ಎರಡು ಹಾಡುಗಳನ್ನು ಗಂಧರ್ವ ಅವರು, ಒಂದು ಹಾಡನ್ನು ಆನಂದ್ ಅವರು ಬರೆದಿದ್ದಾರೆ. ಸಂಗೀತ ನಿರ್ದೇಶನ ಗಂಧರ್ವ ಅವರದ್ದು. ಜಯ ಪ್ರಕಾಶ್ (ಜೆಪಿ) ಕ್ಯಾಮೆರಾದಲ್ಲಿ ಮ್ಯಾಜಿಕ್ ಮಾಡಿದ್ದು, ಜನವರಿಯಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ಹೇಳಿದೆ.