ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-3
ಸೊಸೆ ತಂದ ಸೌಭಾಗ್ಯ
ಸೊಸೆ ತಂದ ಸೌಭಾಗ್ಯ ಸಿನಿಮಾದ `ರವಿವರ್ಮನ ಕಲೆ ಬಲೆ ಸಾಕಾರವೋ… ಈ ಹಾಡು ಯಾರಿಗ್ ಗೊತ್ತಿಲ್ಲ ಹೇಳಿ? ಪ್ರಸಾರ ಭಾರತಿಯಲ್ಲಿ ಟೆಲಿಕಾಸ್ಟ್ ಆಗೋ ಸೂಪರ್ ಹಾಡುಗಳಲ್ಲಿ ಇದೂ ಕೂಡ ಒಂದು. ಪಿ.ಬಿ ಶ್ರೀನಿವಾಸ್ ಅವ್ರ ಜೇನಿನ ದನಿಯಿದೆ, ಹಾಡಿನಲ್ಲಿ ಇಂಪಾದ ರಾಗವಿದೆ, ಮತ್ತೆ ಮತ್ತೆ ಕೇಳಬೇಕು ಅನ್ನೋ ಸಂಗೀತವಿದೆ.
ನ್ನು ಈ ಶೃಂಗಾರಗೀತೆ ಯಾವ್ದೋ ಸಂತೋಷದ ಸನ್ನಿವೇಶದಲ್ಲಿ ಹುಟ್ಟಿರಬಹುದು. ನಿರ್ದೇಶಕ ಜಿ.ಕೆ ವೆಂಕಟೇಶ್, ಗೀತರಚನೆಕಾರ ಆರ್.ಎನ್ ಜಯಗೋಪಾಲ್, ಗಾಯಕ ಪಿ.ಬಿ ಶ್ರೀನಿವಾಸ್ ಇವರು ಆನಂದದ ಕಡಲಲ್ಲಿ ತೇಲಿದಾಗ ಜನ್ಮ ಪಡೆದ ಹಾಡು ಅಂತ ಅನ್ಕೊಂಡ್ರೆ, ನಮ್ಮ ಕಲ್ಪನೆ ತಪ್ಪು..!
ಗೀತರಚನೆಕಾರ ಜಯಗೋಪಾಲ್‍ರ ಆಪ್ತ ಸದಾನಂದ ಅವ್ರ ಇಬ್ಬರೂ ಅಣ್ಣಂದಿರೂ ತೀರಿ ಹೋಗಿದ್ರು. ಇದ್ರ ನೊವಲ್ಲೇ ಈ ಹಾಡನ್ನ ರಚಿಸಲಾಯ್ತು…! ಇನ್ನು ಈ ಅರ್ಥಗರ್ಭಿತ ಸಾಲುಗಳನ್ನು ಹಾಡಿದ ಪಿ.ಬಿ ಶ್ರೀನಿವಾಸ್ ತಮ್ಮ ಸ್ಪೂರ್ತಿ ದೇವತೆಯಾಗಿದ್ದ ತಾಯಿ ತೀರಿದ ಮರುದಿನವೇ ಈ ಹಾಡಿನ ರೆಕಾರ್ಡಿಂಗ್ ಮುಗಿಸಿಕೊಟ್ಟಿದ್ರು! ಈ ಸಾಲುಗಳನ್ನ ಹಾಡುವಾಗ ಪ್ರತಿಯೊಂದು ಪದವೂ ಅಮ್ಮನಿಗಾಗಿಯೇ ಬರೆಯಲಾಗಿದೆ ಅಂದುಕೊಂಡು ಮನದುಂಬಿ ಹಾಡಿದ್ದರಂತೆ. ಶ್ರೀನಿವಾಸ್ ಅವ್ರು ಎಲ್ಲೇ ಹೋದ್ರು ರವಿವರ್ಮನ ಹಾಡು ಹೇಳುವಂತೆ ಒತ್ತಾಯ ಮಾಡ್ತಿದ್ರು ಅಭಿಮಾನಿಗಳು. ಹಾಡನ್ನ ಹಾಡಿದ ಮೇಲೆ ಪಿ.ಬಿ.ಎಸ್ ರಾಗ್ತಿದ್ರು.